ADVERTISEMENT

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ ವೈಭವ

ಮುರಿದು ಬಿದ್ದ ಕಳಶ, ಅಧಿಕಾರಿಗಳ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 13:46 IST
Last Updated 28 ಸೆಪ್ಟೆಂಬರ್ 2022, 13:46 IST
ಜನಸಾಗರದ ನಡುವೆ ಸಾಗಿದ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ
ಜನಸಾಗರದ ನಡುವೆ ಸಾಗಿದ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ   

ಶ್ರೀರಂಗಪಟ್ಟಣ: ಐತಿಹಾಸಿಕ ಪಟ್ಟಣದಲ್ಲಿ 5 ದಿನಗಳ ಕಾಲ ನಡೆಯಲಿರುವ ದಸರಾ ಉತ್ಸವಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಬುಧವಾರ ಜಂಬೂಸವಾರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ನಿಗದಿತ ಸಮಯಕ್ಕಿಂತ ಒಂದು ತಾಸು ತಡಗವಾಗಿ, ಸಂಜೆ 4 ಗಂಟೆಗೆ ದಸರಾ ಉತ್ಸವ ಆರಂಭವಾಯಿತು. ಬಾಬುರಾಯನಕೊಪ್ಪಲಿನ ಬಿ.ಎಂ.ಸುಬ್ರಹ್ಮಣ್ಯ ಕುಟುಂಬ ಸಾಂಪ್ರದಾಯಿಕ ಬನ್ನಿಪೂಜೆ ನೆರವೇರಿಸತು. ಡಾ.ಭಾನು ಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡದ ಸದಸ್ಯರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಜತೆಗೆ ಸಚಿವರಾದ ಕೆ.ಗೋಪಾಲಯ್ಯ , ಕೆ.ಸಿ.ನಾರಾಯಣಗೌಡ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ , ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಎಸ್ ಅಶ್ವತಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸಿದರು.

ADVERTISEMENT

ಮಹೇಂದ್ರ ಹೆಸರಿನ ಆನೆ ಚಾಮುಂಡೇಶ್ವರಿ ದೇವಿಯ ಉತ್ಸವವನ್ನು ಹೊತ್ತು ಸಾಗಿತು. ಕಾವೇರಿ ಮತ್ತು ವಿಜಯ ಆನೆಗಳು ಕುಮ್ಕಿ
ಆನೆಗಳಾಗಿ ಹೆಜ್ಜೆ ಹಾಕಿದವು . ಕಿರಂಗೂರು, ಬಾಬುರಾಯನಕೊಪ್ಪಲು, ಪಟ್ಟಣದ ಕುವೆಂಪು ವೃತ್ತ, ಪುರಸಭೆ ಸರ್ಕಲ್‌ ಮೂಲಕ ಹಾದು ಉತ್ಸವ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣ ತಲುಪಿತು. ಜಾನಪದ ಕಲಾ ತಂಡಗಳು , ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳು ಮೆರವಣಿಗೆಗೆ ಮೆರಗು ನೀಡಿದವು. ದಾರಿಯುದ್ದಕ್ಕೂ ಸಹಸ್ರಾರು ಮಂದಿ ಉತ್ಸವವನ್ನು ಕಣ್ತುಂಬಿಕೊಂಡರು .

ಮುರಿದ ಕಳಶ: ಆನೆಯ ಮೇಲೆ ಅಂಬಾರಿಯನ್ನು ಕೂರಿಸುವಾಗ ಅದರ ಕಳಶ ಮುರಿದು ಬಿತ್ತು. ಬಳಿಕ ಸರಿಪಡಿಸಿ ಅದನ್ನು
ಜೋಡಿಸಿದರೂ 2ನೇ ಬಾರಿಯೂ ಅದೇ ರೀತಿ ಮುರಿದು ಬಿತ್ತು. ನಂತರ ಎಚ್ಚರಿಕೆಯಿಂದ ಕಳಶ ಜೋಡಿಸಿ ಆನೆಯ ಮೇಲೆ ಕ್ರೇನ್‌ ಮೂಲಕ ಇಡಲಾಯಿತು.

ಅಧಿಕಾರಿಗಳು ಎಚ್ಚರಿಕೆಯಿಂದ ಕಳಶ ಅಳವಡಿಸದ ಪರಿಣಾಮ ಈ ರೀತಿಯಾಗಿದೆ ಎಂಬ ಆರೋಪ ಕೇಳಿಬಂತು. ಕಳೆದ ವರ್ಷ ಅಂಬಾರಿ ವಾಲಿದ ವಿಚಾರವೂ ಈ ಸಂದರ್ಭದಲ್ಲಿ ಚರ್ಚೆಯಾಯಿತು.

ಶಾಸಕ ಅಸಮಾಧಾನ: ‘ಸರ್ಕಾರಿ ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ದಸರಾ ಉತ್ಸವ ಉದ್ಘಾಟನೆಗೆ ಆಹ್ವಾನಿಸಲು ಮುಖ್ಯಮಂತ್ರಿ ಅವರೇ ಸಮ್ಮತಿಸಿದ್ದರು. ಕಡೇ ಗಳಿಗೆಯಲ್ಲಿ ಅವರ ಹೆಸರು ಕೈಬಿಟ್ಟಿರುವುದು ಸರಿಯಲ್ಲ. ಇದು ನಿಜಕ್ಕೂ ಬೇಸರ ತರಿಸಿದೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಬನ್ನಿ ಮಂಟಪದ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಿಂದ ಬಂದ ಆನೆಗಳು ಹಾಗೂ ಮಾವುತರನ್ನು ಸ್ವಾಗತಿಸಲು ಮಂಗಳವಾರ ರಾತ್ರಿ ಯಾವ ಅಧಿಕಾರಿಯೂ ಇರಲಿಲ್ಲ, ಇದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.