ADVERTISEMENT

₹ 15 ಕೋಟಿ ವೆಚ್ಚದಲ್ಲಿ ಡಿಸಿಸಿಬಿ ಕಚೇರಿ ನಿರ್ಮಾಣ

ಗಿರಿಜಾ ಟಾಕೀಸ್‌ ಬಳಿಯ ಬ್ಯಾಂಕ್‌ ಜಾಗದಲ್ಲಿ ನೂತರ ಕಟ್ಟಡ, ಅಂತಿಮ ಅನುಮೋದನೆ ಬಾಕಿ

ಎಂ.ಎನ್.ಯೋಗೇಶ್‌
Published 1 ಮಾರ್ಚ್ 2021, 14:38 IST
Last Updated 1 ಮಾರ್ಚ್ 2021, 14:38 IST
ಸಿ.ಪಿ.ಉಮೇಶ್‌
ಸಿ.ಪಿ.ಉಮೇಶ್‌   

ಮಂಡ್ಯ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಪ್ರಧಾನ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರ ನಗರದಲ್ಲಿ ಆಧುನಿಕ, ಹೈಟೆಕ್‌ ಸೌಲಭ್ಯಗಳುಳ್ಳ ಹೊಸ ಕಟ್ಟಡ ತಲೆ ಎತ್ತಲಿದೆ.

ಡಿಸಿಸಿ ಬ್ಯಾಂಕ್‌ ಜಿಲ್ಲೆಯ ಜೀವನಾಡಿಯಾಗಿದ್ದು ರಾಷ್ಟ್ರೀಕೃತ ಬ್ಯಾಂಕ್‌ಗೆ ಸರಿಯಾಟಿಯಾಗುವ ಮಟ್ಟಕ್ಕೆ ಬೆಳೆದಿದೆ. ಜಿಲ್ಲೆಯಾದ್ಯಂತ 55 ಶಾಖೆಗಳನ್ನು ಹೊಂದಿದ್ದು ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ. ಬ್ಯಾಂಕ್‌ ಕಾರ್ಯಚಟುವಟಿಕೆ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ. ನಗರದ ಗುತ್ತಲು ಬಡಾವಣೆಯ ಗಿರಿಜಾ ಟಾಕೀಸ್‌ ಪಕ್ಕದಲ್ಲಿ ಬ್ಯಾಂಕ್‌ ಜಾಗವಿದ್ದು ಅಲ್ಲಿ ₹ 15 ಕೋಟಿ ವೆಚ್ಚದೊಂದಿಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಕಟ್ಟಡ ನಿರ್ಮಾಣ ಸಂಬಂಧ ಸಹಕಾರ ಸಚಿವ ಎಸ್‌.ಟಿ.ಶೋಮಶೇಖರ್‌ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ₹ 9 ಕೋಟಿ ಹಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ, ಮುಂದಿನ ಕ್ರಮವಹಿಸುವಂತೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.

ADVERTISEMENT

ಡಿಸಿಸಿ ಬ್ಯಾಂಕ್‌ ಕಟ್ಟಡ ನಿಧಿಯಿಂದ ₹ 6 ಕೋಟಿ ನೀಡಲು ಆಡಳಿತ ಮಂಡಳಿ ಒಪ್ಪಿದೆ. ಸರ್ಕಾರದ ₹ 9 ಕೋಟಿ ಸೇರಿ ಒಟ್ಟು ₹ 15 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅಂತಿಮವಾಗಿ ಸರ್ಕಾರದ ಅನುಮೋದನೆ ದೊರೆತರೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

‘ಮಂಡ್ಯ ಜಿಲ್ಲೆಯ ಮೇಲೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ವಿಶೇಷ ಕಾಳಜಿ ಇದೆ. ಅದರಿಂದಾಗಿಯೇ ಉತ್ತಮ ಸೌಲಭ್ಯಗಳುಳ್ಳ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ನೀಲನಕ್ಷೆ ಸಿದ್ಧಗೊಂಡಿದ್ದು ಶೀಘ್ರ ಬಿಡುಗಡೆ ಮಾಡಲಾಗುವುದು. ಆಧುನಿಕ ಸೌಲಭ್ಯಗಳೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ ಮಾದರಿಯಲ್ಲಿ ಜನರಿಗೆ ಸಕಲ ಸೌಲಭ್ಯ ನೀಡುವುದು ನಮ್ಮ ಉದ್ದೇಶವಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌ ಹೇಳಿದರು.

ಈಗಿರುವ ಬ್ಯಾಂಕ್‌ ಕಟ್ಟಡ ಹಳೆಯದಾಗಿದ್ದು ಕಚೇರಿ ತಲುಪಲು ಸಮರ್ಪಕ ಸಂಪರ್ಕ ರಸ್ತೆ ಇಲ್ಲ. ಹಿಂದೆ ಮಾರುಕಟ್ಟೆ, ಮುಂದೆ ರೈಲ್ವೆ ಮೇಲ್ಸೇತುವೆ ಇದೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಬ್ಯಾಂಕ್‌ ಕಚೇರಿಯನ್ನು ಸುಂದರ ಪರಿಸರದಲ್ಲಿ ನಿರ್ಮಾಣ ಮಾಡಬೇಕು ಎಂಬುದು ಆಡಳಿತ ಮಂಡಳಿಯ ಗುರಿಯಾಗಿದೆ.

ಹಳೆಯ ಕಟ್ಟಡಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು ಕೆ.ವಿ.ಶಂಕರಗೌಡರ ಕನಸಿನ ಕೂಸು. ಅವರೇ ಸಂಸ್ಥಾಪಕ ಅಧ್ಯಕ್ಷರಾಗಿ ಬ್ಯಾಂಕ್‌ ರೂಪಿಸಿದ್ದರು. 1968ರಲ್ಲಿ ಡಾ.ಎಚ್‌.ಡಿ.ಚೌಡಯ್ಯ ಅಧ್ಯಕ್ಷರಾಗಿದ್ದಾಗ ಕಟ್ಟಡ ನಿರ್ಮಾಣಗೊಂಡಿತ್ತು.

ಈಗಿರುವ ಕಟ್ಟಡದ ವಿಸ್ತೀರ್ಣ 4,500 ಚದರ ಅಡಿ ಇದ್ದು ಮೂರು ಅಂತಸ್ತುಗಳನ್ನು ಹೊಂದಿದೆ. ಗುತ್ತಲಿನ ಗಿರಿಜಾ ಟಾಕೀಸ್‌ ಬಳಿ 26 ಸಾವಿರ ಚದರ ಅಡಿ ಜಾಗವಿದ್ದು ಬೃಹತ್‌ ಕಟ್ಟಡ ತಲೆ ಎತ್ತಲಿದೆ. ಐತಿಹಾಸಿಕ ಬ್ಯಾಂಕ್‌ಗೆ ಹೈಟೆಕ್‌ ಸ್ಪರ್ಶ ನೀಡಲು ಹೊರಟಿರುವ ಆಡಳಿತ ಮಂಡಳಿ ಸುಸಜ್ಜಿತ ಬೋರ್ಡ್‌ ರೂಂ, ಸೇರಿದಂತೆ ವಿವಿಧ ಸೌಲಭ್ಯಗಳುಳ್ಳ ಕಟ್ಟಡ ನಿರ್ಮಿಸಲು ಮುಂದಾಗಿದೆ.

******

ಮನೆಮನೆಗೆ ಸಂಚಾರ ಬ್ಯಾಂಕ್‌

ಜಿಲ್ಲೆಯ ಜನರ ಮನೆಮನೆಗೆ ಡಿಸಿಸಿ ಬ್ಯಾಂಕಿಂಗ್‌ ಸೇವೆ ತಲುಪಿಸಲು ಮುಂದಾಗಿರುವ ಆಡಳಿತ ಮಂಡಳಿಯು ಸಂಚಾರ ಬ್ಯಾಂಕ್‌ ರೂಪಿಸಿದೆ. ಅದಕ್ಕಾಗಿ 2 ವಾಹನಗಳನ್ನು ಖರೀದಿಸಿದ್ದು ಅವು ಜಿಲ್ಲೆಯಾದ್ಯಂತ ಸಂಚರಿಸಿ ಸೇವೆ ನೀಡಲಿವೆ.

‘ಜಿಲ್ಲೆಯ ಪ್ರಮುಖ ಉತ್ಸವ, ಸಂತೆ, ಜಾತ್ರೆ ಸೇರಿದಂತೆ ಜನಸಂದಣಿ ಇರುವ ಕಡೆ ಮೊಬೈಲ್‌ ಬ್ಯಾಂಕ್‌ ವಾಹನಗಳು ಜನರಿಗೆ ಸೇವೆ ಒದಗಿಸಲಿವೆ’ ಎಂದು ಬ್ಯಾಂಕ್‌ನ ಅಧಿಕಾರಿಗಳು ತಿಳಿಸಿದರು.

***

ಡಿಸಿಸಿ ಬ್ಯಾಂಕ್‌ ಇಂಟರ್‌ನೆಟ್‌ ಸೇವೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಜೊತೆಗೆ ಎಲ್ಲಾ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ಗಳನ್ನು ಗಣಕೀಕೃತಗೊಳಿಸಲಾಗುವುದು

–ಸಿ.ಪಿ.ಉಮೇಶ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.