ADVERTISEMENT

ಗದ್ದೆ ರಂಗನಾಥಸ್ವಾಮಿ ದೇಗುಲ ಸ್ಥಳಾಂತರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 8:23 IST
Last Updated 3 ಸೆಪ್ಟೆಂಬರ್ 2020, 8:23 IST
ಶ್ರೀರಂಗಪಟ್ಟಣ ಬಳಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಅಪಾಯಕ್ಕೆ ಸಿಲುಕಿರುವ ಐತಿಹಾಸಿಕ ಗದ್ದೆ ರಂಗನಾಥಸ್ವಾಮಿ ದೇವಾಲಯವನ್ನು ಸ್ಥಳಾಂತರಿಸುವ ಸಂಬಂಧ ಜೋತಿಷಿ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಡಾ.ವಿ. ಭಾನುಪ್ರಕಾಶ್‌ ಶರ್ಮಾ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು
ಶ್ರೀರಂಗಪಟ್ಟಣ ಬಳಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಅಪಾಯಕ್ಕೆ ಸಿಲುಕಿರುವ ಐತಿಹಾಸಿಕ ಗದ್ದೆ ರಂಗನಾಥಸ್ವಾಮಿ ದೇವಾಲಯವನ್ನು ಸ್ಥಳಾಂತರಿಸುವ ಸಂಬಂಧ ಜೋತಿಷಿ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಡಾ.ವಿ. ಭಾನುಪ್ರಕಾಶ್‌ ಶರ್ಮಾ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು   

ಶ್ರೀರಂಗಪಟ್ಟಣ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರಣಕ್ಕೆ ಅಪಾಯಕ್ಕೆ ಸಿಲುಕಿರುವ 500 ವರ್ಷಗಳಷ್ಟು ಹಳೆಯದಾದ ಗದ್ದೆ ರಂಗನಾಥಸ್ವಾಮಿ ದೇವಾಲಯವನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಜೋತಿಷಿ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಡಾ.ವಿ. ಭಾನುಪ್ರಕಾಶ್‌ ಶರ್ಮಾ ತಿಳಿಸಿದರು.

ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ್ದ ಅವರು, ‘500 ವರ್ಷಗಳ ಇತಿಹಾಸ ಇರುವ ದೇವಾಲಯ ಸ್ಥಳಾಂತರಿಸಲು ಜಿಲ್ಲಾಡಳಿತ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದೆ. ದೇಗುಲ ಸ್ಥಳಾಂತರ ಮತ್ತು ಅಭಿವೃದ್ಧಿ ಸಂಬಂಧ ಸಮಿತಿ ರಚಿಸುವಂತೆ ತಹಶೀಲ್ದಾರ್‌ ಎಂ.ವಿ. ರೂಪಾ ಅವರು ನನಗೆ ತಿಳಿಸಿದ್ದಾರೆ. ಆ ಸಮಿತಿಯಲ್ಲಿ ನಾನೂ ಸೇರಿದಂತೆ ಕೃಷ್ಣಭಟ್‌, ಗಂಜಾಂ ಗೋವಿಂದರಾಜು, ಮೈಸೂರಿನ ಡಿ.ಟಿ. ಪ್ರಕಾಶ್‌, ಜಯಸ್ವಾಮಿ ಇತರರು ಇರುತ್ತೇವೆ. ದೇವಾಲಯ ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ವ್ಯವಹರಿಸಲಾಗುತ್ತದೆ’ ಎಂದು ಹೇಳಿದರು.

ದೇವಾಲಯ ಸ್ಥಳಾಂತರ, ಪುನರ್‌ ನಿರ್ಮಾಣ, ರಸ್ತೆ ಅಭಿವೃದ್ಧಿ ಮತ್ತು ಕಾವೇರಿ ನದಿಗೆ ಸೋಪಾನಕಟ್ಟೆ ನಿರ್ಮಾಣ ಉದ್ದೇಶಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ₹ 50 ಲಕ್ಷ ಕೊಡಿಸುವ ಭರವಸೆ ಸಿಕ್ಕಿದೆ. ಹೆಚ್ಚಿನ ಹಣದ ಅಗತ್ಯ ಬಿದ್ದರೆ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗುವುದು. ದೇಗುಲ ಇರುವ ಸ್ಥಳದಿಂದ 150 ಅಡಿ ಬಲಕ್ಕೆ 22 ಗುಂಟೆ ಸರ್ಕಾರಿ ಜಮೀನು ಇದ್ದು, ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ. ಮೂರು ತಿಂಗಳಲ್ಲಿ ದೇಗುಲ ಸ್ಥಳಾಂತರ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದರು.

ADVERTISEMENT

‘ಶಿಲ್ಪಶಾಸ್ತ್ರದ ಪ್ರಕಾರ ರಂಗನಾಥನ ಮೂರ್ತಿಗೆ ಕಳಾಕರ್ಷಣೆ ಮಾಡಲಾಗುತ್ತದೆ. ಕುಂಭಕ್ಕೆ ದೇವರನ್ನು ಆವಾಹನೆ ಮಾಡಿ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಮೂಲ ಶೈಲಿಯ ಪ್ರಕಾರವೇ ದೇವಾಲಯ ನಿರ್ಮಾಣವಾಗಲಿದೆ’ ಎಂದರು.

‘5 ಅಡಿ ಉದ್ದದ ಶ್ರೀರಂಗನಾಥಸ್ವಾಮಿ ನೈರುತ್ಯಕ್ಕೆ ಮುಖ ಮಾಡಿದ್ದು, ಐದು ಹೆಡೆಗಳ ಸರ್ಪದ ಮೇಲೆ ಪವಡಿಸಿದ್ದಾನೆ. ಶ್ರೀದೇವಿ, ಭೂದೇವಿಯರು ಸೇವೆಯಲ್ಲಿ ನಿರತರಾಗಿರುವ ಶಿಲ್ಪ ಅಪರೂಪ’ ಎಂದು ಭಾನುಪ್ರಕಾಶ್‌ ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.