ನಾಗಮಂಗಲ: ‘ಜನರು ತಮ್ಮ ಮನೆ ಮತ್ತು ಸುತ್ತಮುತ್ತಲ ಸನ್ನಿವೇಶಗಳಲ್ಲಿ ಸಂಭವಿಸುವ ಬೆಂಕಿ ಅವಘಡಗಳೊಂದಿಗೆ ಎಂದಿಗೂ ನಿರ್ಲಕ್ಷ್ಯ ತೋರದಿರಿ. ನಿರ್ಲಕ್ಷ್ಯದಿಂದ ಬದುಕು ಸಂಕಷ್ಟಕ್ಕೆ ದೂಡುತ್ತದೆ’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ ಹೇಳಿದರು.
ಪಟ್ಟಣದ ಕೆ. ಮಲ್ಲೇನಹಳ್ಳಿ ಸಮೀಪದ ಅಗ್ನಿ ಶಾಮಕ ದಳದ ಕಚೇರಿಯಿಂದ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಮತ್ತು ಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ಸೋಮವಾರ ನಡೆದ ಅಗ್ನಿಶಾಮಕ ಸೇವಾ ಸಪ್ತಾಹ ಜಾಗೃತಿ ಜಾಥಾದಲ್ಲಿ ಅಗ್ನಿ ಸುರಕ್ಷತಾ ಸಾಧನ ನಿರ್ವಹಣೆ, ಅವಘಡ ತಗ್ಗಿಸುವ ಸಾಧನಗಳನ್ನು ಬಳಸುವ ಕುರಿತು ಅವರು ಉಪನ್ಯಾಸ ನೀಡಿದರು.
‘ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿಯ ತೀವ್ರತೆ ದೊಡ್ಡದಿರಲಿ, ಸಣ್ಣದಿರಲಿ ಅಗ್ನಿಶಾಮಕ ತುರ್ತು ಸೇವೆ ಸಂಪರ್ಕಿಸುವ ಕೆಲಸ ಮಾಡಬೇಕು. ಜೊತೆಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಬೆಂಕಿ ತಗುಲಿರುವ ಜಾಗ ಮತ್ತು ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಬೆಂಕಿ ನಂದಿಸಬೇಕಾಗುತ್ತದೆ. ವಿದ್ಯುತ್‌ನಿಂದ ಉಂಟಾದ ಬೆಂಕಿಗೆ ಮರಳನ್ನು ಎರಚುವುದು, ಸ್ವಿಚ್ ಆಫ್ ಮಾಡುವುದನ್ನು ಮಾಡಬೇಕು. ಪೆಟ್ರೋಲ್ ಮತ್ತು ಸೀಮೆಎಣ್ಣೆಯಿಂದ ತಗುಲಿದ ಬೆಂಕಿಗೆ ನೀರು ಸುರಿಯದೆ ಮರಳನ್ನು ಬಳಸಿ ಬೆಂಕಿ ನಂದಿಸಬೇಕು’ ಎಂದು ತಿಳಿಸಿದರು.
ಸಪ್ತಾಹದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಗ್ರಾಮಸ್ಥರು, ರೈತರಿಗೆ ಅಗ್ನಿಶಮನದ ಕುರಿತು ಜಾಗೃತಿ ಮೂಡಿಸಲಾಯಿತು.
ಅಗ್ನಿಶಾಮಕ ಸಿಬ್ಬಂದಿ ಚಂದ್ರಶೇಖರ್, ರಾಹುಲ್, ಪ್ರಶಾಂತ್ ಎಲ್.ಮಾಸ್ತಿ, ಕಿರಣ್ ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.