ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳವಾಡಿ ಬಳಿಯ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯ (ಎಂಐಟಿ)ದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮವನ್ನು ಮೈಸೂರು ವಲಯ ವಿಧಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಗಾಯತ್ರಿ ಉದ್ಘಾಟಿಸಿದರು.
ಶ್ರೀರಂಗಪಟ್ಟಣ: ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ಸಾಗಣೆ ಮಾಡುವವರನ್ನು ಎನ್‌ಡಿಪಿಎಸ್ ಕಾಯಿದೆ ಅಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಸಿದರು.
ತಾಲ್ಲೂಕಿನ ಬೆಳವಾಡಿ ಬಳಿಯ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯ (ಎಂಐಟಿ)ದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಯತ್ನ ನಡೆಸುತ್ತಾರೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ. ಈ ಬಗ್ಗೆ ಎಚ್ಚರದಿಂದ ಇರಬೇಕು. ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ದಾಸರಾದರೆ ಅದರಿಂದ ಹೊರ ಬರುವುದು ಕಷ್ಟ. ಭವಿಷ್ಯದ ಜೀವನ ಹಾಳಾಗುತ್ತದೆ. ಅಂತಹ ನಿಷೇಧಿತ ವಸ್ತುಗಳ ಸೇವನೆ, ಮಾರಾಟ ಮತ್ತು ಸಾಗಣೆ ಬಗ್ಗೆ ಸುಳಿವು ಸಿಕ್ಕರೆ 112 ಗೆ ಕರೆ ಮಾಡಿ ತಿಳಿಸಬೇಕು’ ಎಂದು ಹೇಳಿದರು.
ಮೈಸೂರು ವಲಯ ವಿಧಿ ವಿಜ್ಞಾನ ಕೇಂದ್ರ (ಆರ್‌ಎಸ್‌ಎಫ್‌ಎಲ್) ದ ಹಿರಿಯ ವಿಜ್ಞಾನಿ ಡಾ.ಗಾಯತ್ರಿ ಮಾತನಾಡಿ, ‘ಮಾದಕ ವಸ್ತುಗಳ ಸೇವನೆಯಿಂದ ಕ್ಷಣಿಕ ತೃಪ್ತಿ ಸಿಗುತ್ತದೆ. ಆದರೆ ಅದರಿಂದ ಮಾಸಿಕ ಸ್ಥಿಮಿತ ತಪ್ಪುತ್ತದೆ. ಕಾನೂನು ವಿರೋಧಿ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ. ಬದುಕು ನರಕವಾಗುತ್ತದೆ. ಹಾಗಾಗಿ ಅಂತಹ ದುಶ್ಚಟಗಳಿಂದ ದೂರ ಇರಬೇಕು’ ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಶಾಂತಮಲ್ಲಪ್ಪ, ಕಾಲೇಜಿನ ಪ್ರಾಂಶುಪಾಲ ಪ್ರೊ. ನರೇಶಕುಮಾರ್, ಪ್ರೊ.ಕೃಷ್ಣೇಗೌಡ, ಮುರಳಿ, ಆಡಳಿತಾಧಿಕಾರಿ ಅನಿರುದ್ಧ, ಮಂಜುನಾಥ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.