ADVERTISEMENT

ಶಾಲೆಗಳ ಅಭಿವೃದ್ಧಿಗೆ ಅನುದಾನ ಬಳಕೆಯಾಗಲಿ: ಮಹದೇವ ಪ್ರಕಾಶ್‌

‘ಸುರೇಶ್‌ಕುಮಾರ್ ಶಿಕ್ಷಣಯಾನ’ ವೆಬಿನಾರ್‌; ಮಹದೇವ ಪ್ರಕಾಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 13:23 IST
Last Updated 27 ಆಗಸ್ಟ್ 2020, 13:23 IST

ಮಂಡ್ಯ: ‘ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ 20ರಷ್ಟು ಹಣ ಕಡ್ಡಾಯವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಕೆಯಾಗಬೇಕು’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್‌ ಹೇಳಿದರು.

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಹಾಗೂ ಸುಧಾರಣಾ ಸಮಿತಿ ವತಿಯಿಂದ ಗುರುವಾರ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ವರ್ಷದ ಸಾಧನೆ ಕುರಿತ ‘ಸುರೇಶ್‌ ಕುಮಾರ್‌ ಶಿಕ್ಷಣಯಾನ’ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳ ದತ್ತು ನೀತಿಯನ್ನು ಸದೃಢಗೊಳಿಸುವ ನಿರ್ಧಾರ ಅತ್ಯಂತ ಪ್ರಮುಖವಾಗುದುದು. ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಪ್ರತಿಯೊಬ್ಬ ಶಾಸಕ ತಮ್ಮ ಕ್ಷೇತ್ರದ ಐದು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಬೇಕು. ಮುಖ್ಯಮಂತ್ರಿಗಳು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಶೇ 20ರಷ್ಟು ಹಣವನ್ನು ಶಾಲೆಗಳ ಅಭಿವೃದ್ಧಿಗೆ ಕಡ್ಡಾಯವಾಗಿ ಬಳಸುವಂತೆ ನಿಬಂಧನೆ ವಿಧಿಸಬೇಕು’ ಎಂದು ಹೇಳಿದರು.

ADVERTISEMENT

‘ಇಂದು ಶಿಕ್ಷಣ ಕ್ಷೇತ್ರ ವ್ಯಾಪಾರಿಕರಣಗೊಂಡಿದೆ. ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್‌ ಮಾಧ್ಯಮ, ಖಾಸಗಿ ಶಾಲೆಗಳ ಓಟ ವ್ಯಾಪಕವಾಗಿದೆ. ಇದನ್ನು ತಡೆದು ಸರ್ಕಾರಿ ಶಾಲೆಗಳ ಬಲಪಡಿಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸುರೇಶ್‌ ಕುಮಾರ್‌ ಅವರು ಕಳೆದೊಂದು ವರ್ಷದಿಂದ ಕೈಗೊಂಡ ಕಾರ್ಯಗಳು ದಿಕ್ಸೂಚಿಯಾಗಿವೆ. ಅವರು ರಾಜಕಾರಣಿ ಮಾತ್ರವೇ ಅಲ್ಲದೇ ಮುತ್ಸದ್ಧಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಮಾಧ್ಯಮ ಕಂಡಂತೆ ಸುರೇಶ್‌ ಕುಮಾರ್‌’ ವಿಷಯ ಕುರಿತು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ ‘ಸುರೇಶ್‌ ಕುಮಾರ್‌ ಮಾತ್ರವಲ್ಲದೇ ಹಲವು ಸಚಿವರು ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಸಚಿವರ ಸಾಧನೆಗಳ ಮೌಲ್ಯಮಾಪನಕ್ಕೆ ಒಂದು ವರ್ಷ ಅಳತೆಗೋಲಲ್ಲ, ಆದರೆ ಸುರೇಶ್‌ಕುಮಾರ್‌ ಅವರ ವಿಷಯದಲ್ಲಿ ಇದು ಅನ್ವಯವಾಗುವುದಿಲ್ಲ. ಹಲವು ಸವಾಲುಗಳನ್ನು ದಿಟ್ಟವಾಗಿ ನಿಭಾಯಿಸಿರುವ ಅವರು ಶಿಕ್ಷಣ ಕ್ಷೇತ್ರಕ್ಕೆ ಗಟ್ಟಿಯಾದ ಅಡಿಪಾಯ ಹಾಕಿದ್ದಾರೆ’ ಎಂದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಆನ್‌ಲೈನ್‌ ತರಗತಿ ಮುಂತಾದ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅವರು ಶಿಕ್ಷಕರು, ಪೋಷಕರು ಹಾಗೂ ಮಕ್ಕಳ ಅಭಿಪ್ರಾಯ ಪಡೆದಿದ್ದಾರೆ. ಮುಂದೆ ಶಾಲೆ ಆರಂಭದ ವಿಚಾರದಲ್ಲೂ ಇದೇ ಮಾದರಿ ಅನುಸರಿಸುತ್ತಿದ್ದಾರೆ. ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಮೀರಿ, ಅದನ್ನು ಬದಲಾವಣೆ ಮಾಡಿ ಮುನ್ನಡೆಯುತ್ತಿರುವ ರೀತಿ ಅದ್ಭತವಾದುದು’ ಎಂದರು.

‘ಪ್ರಜಾವಾಣಿ ಸೇರಿ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಅವರು ಪರಿಣಾಮಕಾರಿಯಾಗಿ ಸ್ಪಂದಿಸಿದ್ದಾರೆ. ಸಾಧಕ ಮಕ್ಕಳನ್ನು ಅವರ ಮನೆಗಳಿಗೇ ತೆರಳಿ ಅಭಿನಂದಿಸುವ ಗುಣ ಅಪರೂಪವಾದುದು. ಶಿಕ್ಷಣ, ಶಿಕ್ಷಕ ಹಾಗೂ ಶೈಕ್ಷಣಿಕ ಸ್ನೇಹಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಸುರೇಶ್‌ ಕುಮಾರ್‌ ಅವರ ಮುಂದೆ ಈಗ ದೊಡ್ಡ ಅವಕಾಶವಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆ ಶಿಕ್ಷಣದ ಬಗ್ಗೆ ಸ್ಪಷ್ಟತೆ ಇದೆ. ಅದನ್ನು ಪರಿಣಾಮಕಾರಿಯಾಗಿ ದಕ್ಷತೆಯಿಂದ ಜಾರಿಗೊಳಿಸಬೇಕಾಗಿದೆ. ಅದು ಶಿಕ್ಷಣ ಕ್ಷೇತ್ರ ಹಾಗೂ ನಮ್ಮ ರಾಜ್ಯದ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಇದನ್ನು ಜೀವಮಾನದ ದೊಡ್ಡ ಅವಕಾಶ ಎಂದು ಪರಿಗಣಿಸಿ ಮುಂದಿನ ತಲೆಮಾರು ನೆನಪಿನಲ್ಲಿ ಇಟ್ಟುಕೊಳ್ಳುವ ಮಾದರಿಯಲ್ಲಿ ಶಿಕ್ಷಣ ನೀತಿ ಜಾರಿಗೊಳಿಸಬೇಕಾಗಿದೆ’ ಎಂದು ಹೇಳಿದರು.

ಪ್ರೊ.ದೇವರಾಜೇಗೌಡ, ಮೈ.ವಿ.ರವಿಶಂಕರ್‌, ದೊಡ್ಡಬೋರಯ್ಯ, ಹೇಮಲತಾ, ಡಾ.ಮನು ಗೊರವಾಲೆ, ನಾಗೇಶ್‌, ಹನುಮಂತಯ್ಯ, ಕೆ.ವಸಂತಕುಮಾರ್‌, ಬಿ.ಎಸ್‌.ಅನುಪಮಾ ಇದ್ದರು. ರಾಜ್ಯ ಶೈಕ್ಷಣಿಕ ದಿಕ್ಸೂಚಿ ಹಾಗೂ ಸುಧಾರಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ವೆಬಿನಾರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.