ADVERTISEMENT

ಹಿಟ್ಟನಹಳ್ಳಿ ಕೊಪ್ಪಲು: ಅನಧಿಕೃತ ಅಂಗಡಿ ತೆರವು

ಕಾರ್ಯಾಚರಣೆಗೆ ಪೊಲೀಸರ ನಿಯೋಜನೆ: ಮತ್ತೊಂದು ಬೇಡಿಕೆ ಸಲ್ಲಿಸಿದ ಅಂಗಡಿಗಳ ಮಾಲೀಕರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 4:47 IST
Last Updated 10 ಏಪ್ರಿಲ್ 2021, 4:47 IST
ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತಹಶೀಲ್ದಾರ್ ಎಂ.ವಿಜಯಣ್ಣ ನೇತೃತ್ವದಲ್ಲಿ ತೆರವುಗೊಳಿಸಲಾಯಿತು
ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತಹಶೀಲ್ದಾರ್ ಎಂ.ವಿಜಯಣ್ಣ ನೇತೃತ್ವದಲ್ಲಿ ತೆರವುಗೊಳಿಸಲಾಯಿತು   

ಮಳವಳ್ಳಿ: ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಮಳವಳ್ಳಿ-ಮಂಡ್ಯ ಮುಖ್ಯರಸ್ತೆಯ ಎರಡೂ ಬದಿಯ ಅನಧಿಕೃತ ಅಂಗಡಿಗಳನ್ನು ತಹಶೀಲ್ದಾರ್ ಎಂ.ವಿಜಯಣ್ಣ ನೇತೃತ್ವದಲ್ಲಿ ವಿವಿಧ ಇಲಾಖೆಯ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.

ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಮುಖ್ಯರಸ್ತೆ ಬದಿಯ ಲೋಕೋಪಯೋಗಿ, ಕಾವೇರಿ ನೀರಾವರಿ ನಿಗಮ ಹಾಗೂ ಪಂಚಾಯಿತಿ ಜಾಗಗಳಲ್ಲಿ 20 ವರ್ಷಗಳಿಂದ ಸುಮಾರು 50 ಮಂದಿ ಅನಧಿಕೃತವಾಗಿ ಮಾಂಸದಂಗಡಿ ಸೇರಿದಂತೆ ಹಲವು ಅಂಗಡಿ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ವಿಸಿ ನಾಲೆಗೆ ಹೊಂದಿಕೊಂಡಂತೆ ಇರುವ ದಡದಲ್ಲಿದ್ದ ಅಂಗಡಿಗಳಿಂದ ಮಾಂಸದ ತ್ಯಾಜ್ಯ, ಕಸವನ್ನು ಕಾಲುವೆ ನೀರಿಗೆ ಸೇರುತ್ತಿದ್ದವು. ಹೀಗಾಗಿ ತೆರವುಗೊಳಿಸಲು ನೋಟಿಸ್ ನೀಡಲಾಗಿತ್ತು.

ಶುಕ್ರವಾರ ಬೆಳಿಗ್ಗೆ 6ಗಂಟೆ ವೇಳೆಗೆ ಬಹುತೇಕ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಪೆಟ್ಟಿ ಅಂಗಡಿಗಳನ್ನು ಸ್ಥಳಾಂತರ ಮಾಡಿಕೊಂಡಿದ್ದರು. ತಿಪ್ಪೆ ಗುಂಡಿಗಳು ಹಾಗೂ ಕಟ್ಟಡಗಳನ್ನು ಜೆಸಿಬಿ ಮೂಲಕ ಅಧಿಕಾರಿಗಳು ತೆರವುಗೊಳಿಸಿದರು.

ADVERTISEMENT

ತಹಶೀಲ್ದಾರ್ ಎಂ.ವಿಯಜಣ್ಣ ಮಾತನಾಡಿ, ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಲೋಕೋಪಯೋಗಿ, ಕಾವೇರಿ ನೀರಾವರಿ ನಿಗಮ ಹಾಗೂ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ 48 ಮಂದಿ ಅನಧಿಕೃತ ಅಂಗಡಿಗಳನ್ನು ಹಾಗೂ ಕೆಲವರು ಕಸದ ರಾಶಿಗಳನ್ನು ಹಾಕಿದ್ದರು. ಹೈಕೋರ್ಟ್ ಹಾಗೂ ಉಪವಿಭಾಗಾಧಿಕಾರಿಗಳ ಆದೇಶದಂತೆ ತೆರವುಗೊಳಿಸಲಾಗಿದೆ ಎಂದರು.

ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಎಚ್.ಲಕ್ಷ್ಮಿನಾರಾಯಣ ಪ್ರಸಾದ್ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್.ಸತೀಶ್, ತಾ.ಪಂ.ಸದಸ್ಯ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ, ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐಗಳಾದ ಡಿ.ರವಿಕುಮಾರ್, ಕೆ.ಎಂ.ಮಹೇಶ್, ಮಲ್ಲಪ್ಪ ಇದ್ದರು.

15 ದಿನಗಳ ಗಡುವು: ತೆರವಿಗೆ ವಿರೋಧ ವ್ಯಕ್ತಪಡಿಸದ ಅಂಗಡಿ ಮಾಲೀಕರು, ಗ್ರಾಮದಲ್ಲಿ ಇರುವ ಅಕ್ರಮ ಕಟ್ಟಡಗಳು, ಸರ್ಕಾರಿ ಜಾಗಗಳಲ್ಲಿ ನಿರ್ಮಾಣ ಮಾಡಿಕೊಂಡಿರುವ ರಸ್ತೆ, ಪಾರ್ಕಿಂಗ್ ಸೇರಿದಂತೆ ಕೆಲವೆಡೆ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು 15 ದಿನಗಳ ಒಳಗೆ ತೆರವುಗೊಳಿಸಿ ಪಂಚಾಯಿತಿಯ ವಶಕ್ಕೆ ಪಡೆಯಬೇಕು. ನಮಗೊಂದು ನ್ಯಾಯ ಅವರಿಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು. ಕ್ರಮ ತೆಗೆದುಕೊಳ್ಳದಿದ್ದರೆ ನಾವು ಮತ್ತೆ ಅದೇ ಜಾಗದಲ್ಲಿ ಅಂಗಡಿ ಇಟ್ಟಿಕೊಳ್ಳುತ್ತೇವೆ ಎಂದು ತಾ.ಪಂ.ಇಒ ಬಿ.ಎಸ್.ಸತೀಶ್ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.