ನಾಗಮಂಗಲ: ‘ಸಮಾಜದಲ್ಲಿ ಬದುಕುತ್ತಿರುವ ನಾವೆಲ್ಲರೂ ಪರಿಸರದ ಮೇಲೆ ದೌರ್ಜನ್ಯ ಮಾಡುತ್ತಾ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದು, ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕಿದೆ’ ಎಂದು ಶಿಕ್ಷಕ ಶ್ರೀನಿವಾಸಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಪಿ.ನೇರಲಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲೆಯ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಉಳಿಸಿಸಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಮಾಡಬೇಕು. ಅಲ್ಲದೇ ವಿದ್ಯಾರ್ಥಿಗಳು ಪರಿಸರದ ಕುರಿತು ಜಾಗೃತರಾಗುವ ಜೊತೆಗೆ ನಿಮ್ಮ ನೆರೆಹೊರೆಯವರಿಗೂ ಅರಿವು ಮೂಡಿಸಬೇಕುಠ ಎಂದರು.
ಶಿಕ್ಷಕ ಶಹಬುದ್ದೀನ್ ಡಿ.ಬಣಕಾರ್ ಮಾತನಾಡಿ, ‘ಶಿಕ್ಷಣವನ್ನು ಪಡೆಯುವುದರ ಜೊತೆಗೆ ಪರಿಸರ ಕಾಳಜಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಶಾಲೆಯ ಆವರಣದಲ್ಲಿ ಜಂಬುನೇರಳೆ, ಅತ್ತಿ, ಹಲಸು, ಬಿದಿರು, ಸೀಬೆ ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೆಟ್ಟರು. ಶಿಕ್ಷಕ ಶಿವರಾಜು, ಶಾಲಾ ಸಂಸತ್ತಿನ ಪದಾಧಿಕಾರಿಗಳಾದ ಬಾಲಾಜಿ, ಚೈತ್ರಾ, ಭವನ, ಕೀರ್ತನ್, ಪ್ರವೀಣ್, ವರ್ಷ, ಯಶಸ್, ಧನುಷ್, ಪಂಕಜ್,ದಯಾನಂದ ಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.