ಮಳವಳ್ಳಿ: ತಾಲ್ಲೂಕಿನ ಗೌಡಗೆರೆ ಬಳಿಯ ಕೊಡಿಹಳ್ಳದ ಕ್ರಸ್ಟ್ ಗೇಟ್ ಮುರಿದು ಹಲವು ವರ್ಷ ಕಳೆದರೂ ಅದನ್ನು ಸರಿಪಡಿಸಲು ಕಾವೇರಿ ನೀರಾವರಿ ನಿಗಮದ ಕೆ.ಎಂ.ದೊಡ್ಡಿ ಭಾಗದ ಅಧಿಕಾರಿಗಳು ಮುಂದಾಗಿಲ್ಲ ಎಂದು ರೈತರು ಆರೋಪಿಸಿದರು.
‘ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಭಾಗದ ವ್ಯಾಪ್ತಿಯ ಕ್ರಸ್ಟ್ ಗೇಟ್ ಮುರಿದಿರುವ ಕಾರಣ ಕಳೆದ ಒಂದು ವರ್ಷದಿಂದ ಗೌಡಗೆರೆ ಮತ್ತು ಮೇಗಳಾಪುರ ನಾಲೆಯ ವ್ಯಾಪ್ತಿಯ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ. ಇದ್ದರಿಂದ ಬೆಳೆಗಳು ಒಣಗುತ್ತಿದೆ. ಹಲವು ಬಾರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕ್ರಸ್ಟ್ ಗೇಟ್ ಬಳಿ ಗಿಡಗಂಟಿಗಳು ಅಗಾಧ ಪ್ರಮಾಣದಲ್ಲಿ ಬೆಳೆದಿದ್ದು, ನೀರು ಸರಾಗವಾಗಿ ಹರಿಯದಂತೆ ಆಗಿದೆ. ಇಂಥ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ’ ರೈತರು ಆರೋಪಿಸಿದರು.
ರೈತ ಸೋಮೇಶ್ ಮಾತನಾಡಿ, ‘ಗೌಡಗೆರೆ ಬಳಿಯ ಕೊಡಿಹಳ್ಳದ ಕ್ರಸ್ ಗೇಟ್ ಮೂಲಕ ವಿವಿಧ ಭಾಗಗಳ ಸುಮಾರು 350ರಿಂದ 400 ಎಕರೆ ಪ್ರದೇಶಕ್ಕೆ ನೀರು ಹರಿಯುತ್ತದೆ. ಕ್ರಸ್ಟ್ ಗೇಟ್ ಮುರಿದಿದ್ದರೂ ಅಧಿಕಾರಿಗಳು ಸರಿಪಡಿಸಿಲ್ಲ. ಸುಮಾರು ₹15ರಿಂದ 20 ಸಾವಿರ ಖರ್ಚಾಗುವ ಕೆಲಸಕ್ಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಕೂಡಲೇ ಹೊಸ ಕ್ರಸ್ಟ್ ಗೇಟ್ ಅಳವಡಿಸಬೇಕು’ ಎಂದು ಆಗ್ರಹಿಸಿದರು.
Quote - ಕ್ರಸ್ಟ್ ಗೇಟ್ ಮುರಿದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತು ಕಾಮಗಾರಿಗಳ ಪಟ್ಟಿಗೆ ಸೇರಿಸಿ ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಪ್ರಶಾಂತ್ ಕಾವೇರಿ ನೀರಾವರಿ ನಿಗಮದ ಕೆ.ಎಂ.ಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.