ಮಂಡ್ಯ: ರೈತರ ಜೀವನಾಡಿ ಕೆ.ಆರ್.ಎಸ್. ಅಣೆಕಟ್ಟೆ ಸುರಕ್ಷತೆಗೆ ಧಕ್ಕೆ ತರುವ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ‘ಕಾವೇರಿ ಆರತಿ’ ಮತ್ತು ‘ಅಮ್ಯೂಸ್‌ಮೆಂಟ್ ಪಾರ್ಕ್’ ಯೋಜನೆಗಳಿಗೆ ನಮ್ಮ ಸಂಪೂರ್ಣ ವಿರೋಧವಿದೆ’ ಎಂದು ರೈತಸಂಘದ ಮುಖಂಡರು ಸರ್ವಾನುಮತದ ನಿರ್ಣಯ ಮಂಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಕಾವೇರಿ ಆರತಿ ಅನುಷ್ಠಾನ ಮತ್ತು ಕೆಆರ್‌ಎಸ್ ಬೃಂದಾವನ ಉದ್ಯಾನ ಉನ್ನತೀಕರಣ ಕುರಿತ ಸಭೆಯಲ್ಲಿ ರೈತ ಮುಖಂಡರು, ಈ ಎರಡು ಯೋಜನೆಗಳಿಂದಾಗುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ರಾಜ್ಯ ಸರ್ಕಾರದ ಎರಡು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ.
ಎರಡು ಯೋಜನೆಗಳ ಬಗ್ಗೆ ವಿವರಣೆ ನೀಡಲು ಬೆಂಗಳೂರಿನಿಂದ ಬಂದಿದ್ದ ಉಪಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಅವರಿಗೆ ರೈತರು ಅವಕಾಶವನ್ನೇ ಕೊಡಲಿಲ್ಲ. ‘ಯೋಜನೆಗಳೇ ಬೇಡ ಎಂದ ಮೇಲೆ ನಿಮ್ಮ ವಿವರಣೆ ಯಾರಿಗೆ ಬೇಕು’ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿದ್ದ ಸಚಿವರು, ಶಾಸಕರು ತೀವ್ರ ಮುಜುಗರ ಅನುಭವಿಸುವಂತಾಯಿತು.
‘₹92 ಕೋಟಿ ವೆಚ್ಚದ ಕಾವೇರಿ ಆರತಿ, ₹2,600 ಕೋಟಿ ಮೊತ್ತದ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗಳನ್ನು ಮಾಡಿ ಎಂದು ನಿಮ್ಮ ಬಳಿ ಯಾರು ಬೇಡಿಕೆ ಇಟ್ಟಿದ್ದಾರೆ. ಈ ಕೋಟ್ಯಂತರ ರೂಪಾಯಿ ಹಣದಲ್ಲಿ ಉಪ ನಾಲೆಗಳನ್ನು ದುರಸ್ತಿಗೊಳಿಸಿ ಮತ್ತು ಕೆರೆ–ಕಟ್ಟೆಗಳ ಹೂಳು ತೆಗೆಸಿ’ ಎಂದು ರೈತರು ಒತ್ತಾಯಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ‘ಕರ್ಪೂರದ ಆರತಿ ಮಾಡಲು ₹92 ಕೋಟಿ ಬೇಕಾ? ನಿಮ್ಮ ಮನೆಗಳಲ್ಲಿ ಆರತಿ ಮಾಡಲು ನಮ್ಮ ಅಭ್ಯಂತರವಿಲ್ಲ. ಕೆಆರ್‌ಎಸ್ ಡ್ಯಾಂ ಬಳಿ 10 ಸಾವಿರ ಜನ ಸೇರಿ ‘ಕಾವೇರಿ ಆರತಿ’ ಮಾಡಿದರೆ ಅಲ್ಲಿಯ ನೀರು ಎಷ್ಟು ಕಲುಷಿತವಾಗಬಹುದು. ಉಂಟಾಗುವ ಪರಿಸರ ಮಾಲಿನ್ಯವನ್ನು ಊಹಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.
ಶಾಸಕರ ವಿರುದ್ಧ ಕಿಡಿ:
ಮಂಡ್ಯ ಶಾಸಕ ಪಿ.ರವಿಕುಮಾರ್ ಅವರು ‘ಯಾರೇ ವಿರೋಧಿಸಿದರೂ ಕಾವೇರಿ ಆರತಿ ಮಾಡುತ್ತೇವೆ’ ಎಂದು ಸವಾಲು ಹಾಕುತ್ತಾರೆ. ಇಂಥ ಸವಾಲಿಗೆ ರೈತಸಂಘದವರು ಬಗ್ಗುವುದಿಲ್ಲ. ಅಣೆಕಟ್ಟೆಯ ಉಳಿವಿಗೆ ಮತ್ತು ಪರಿಸರ ಸಂರಕ್ಷಣೆಗಾಗಿ ನಮ್ಮ ಹೋರಾಟ’ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದರು.
ಸಿಎಂ ಡಿಸಿಎಂ ಜೊತೆ ಚರ್ಚಿಸುವೆ: ಸಚಿವ
‘ಎರಡು ಯೋಜನೆಗಳ ಬಗ್ಗೆ ರೈತ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ. 6 ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ಶಾಸಕರು ಸಭೆ ನಡೆಸಿ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ರೈತರ ವಿರೋಧದ ಬಗ್ಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬಳಿ ಚರ್ಚಿಸುತ್ತೇನೆ. ಆನಂತರ ಸರ್ಕಾರದ ನಿರ್ಧಾರವನ್ನು ನಿಮಗೆ ತಿಳಿಸುತ್ತೇನೆ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.