ಮಂಡ್ಯ: ‘ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ರೈತರು ನಿರಾತಂಕವಾಗಿ ಕೃಷಿ ಕೆಲಸಗಳನ್ನು ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 4,200 ಮೆಟ್ರಿಕ್ ಟನ್ ಯೂರಿಯಾ ಲಭ್ಯವಿದ್ದು, ಎಂದು ತಿಳಿಸಿದರು.
ಈಗಾಗಲೇ ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲಗಳಲ್ಲಿ ನಾಟಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಭಾಗದಲ್ಲೂ ನಾಟಿ ಕೆಲಸ ಶುರುವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರಿಗೆ ನಾಟಿ ಸಂದರ್ಭದಲ್ಲಿ ಯೂರಿಯಾ ಬದಲು ಎನ್.ಪಿ.ಕೆ ಕಾಂಪ್ಲೆಕ್ಸ್ ಅನ್ನು ಬಳಸುವಂತೆ ಜಾಗೃತಿ ಮೂಡಿಸಿ ಎಂದರು.
ನ್ಯಾನೊ ಯೂರಿಯಾ ಬಳಸಿ:
ಮೇವು ವೇಗವಾಗಿ ಬೆಳೆಯಲು ರೈತರು ಹೆಚ್ಚು ಯೂರಿಯಾ ಬಳಸುತ್ತಾರೆ. ಮೇವು ವೇಗವಾಗಿ ಬೆಳೆದರೂ ಅದರಲ್ಲಿ ಪೌಷ್ಟಿಕಾಂಶಗಳ ಕೊರತೆ ಇರುತ್ತದೆ. ಅದರಿಂದ ಹಾಲಿನ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರ ಕುರಿತಾಗಿ ರೈತರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಇದರಿಂದಾಗಿ ಯೂರಿಯಾ ಬದಲು ನ್ಯಾನೊ ಯೂರಿಯಾ ಬಳಸಬೇಕು ಎಂದರು.
ರೈತರು ನಾಟಿ ಸಂದರ್ಭದಲ್ಲಿ ಹೆಚ್ಚಾಗಿ ಯೂರಿಯಾ ಬಳಕೆ ಮಾಡುವುದರಿಂದ ಬೆಳೆಯ ಗುಣಮಟ್ಟ ಕುಂದುತ್ತದೆ. ಆದ್ದರಿಂದ ನಾಟಿ ಸಂದರ್ಭದಲ್ಲಿ ಕಾಂಪ್ಲೆಕ್ಸ್, ಹಸಿರೆಲೆ ಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಬಳಕೆ ಮಾಡಬೇಕು ಎಂದರು.
ಜಿಲ್ಲೆಗೆ 6 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ಬಿತ್ತನೆ ಬೀಜದ ಅಗತ್ಯವಿದೆ, ಪ್ರಸ್ತುತ ಜಿಲ್ಲೆಗೆ ಬಿತ್ತನೆ ಬೀಜದ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.
ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ದಿನೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಕೃಷಿ ಇಲಾಖೆ ಉಪನಿರ್ದೇಶಕ ಮುನೇಗೌಡ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾವನ್ನು ರೈತರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಬೆಳೆಗಳ ಗುಣಮಟ್ಟ ಕಮ್ಮಿಯಾಗುತ್ತದೆ. ಯೂರಿಯಾ ಬದಲು ಕಾಂಪ್ಲೆಕ್ಸ್ ಬಳಸಿ – ಅಶೋಕ್ ವಿ.ಎಸ್. ಜಂಟಿ ಕೃಷಿ ನಿರ್ದೇಶಕ ಮಂಡ್ಯ
ಕೃತಕ ಅಭಾವ
ಸೃಷ್ಟಿಯಾಗದಂತೆ ಕ್ರಮವಹಿಸಿ ಪಿ.ಒ.ಎಸ್ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಹಾಗೂ ಲಭ್ಯವಿರುವ ಭೌತಿಕ ದಾಸ್ತಾನಿಗೂ ತಾಳೆ ಇರಬೇಕು ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಪರೀಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ಕೃತಕ ಅಭಾವ ಸೃಷ್ಟಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ರಸಗೊಬ್ಬರವನ್ನು ಅನಧಿಕೃತವಾಗಿ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸಬೇಕು ಎಂದು ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.