ADVERTISEMENT

ಪ್ರವಾಹ: ಸಂಸದರು ಶೀಘ್ರ ಪರಿಹಾರ ತರಲಿ

ಅತೀವೃಷ್ಟಿಯಿಂದ ₹ 20 ಸಾವಿರ ಕೋಟಿ ನಷ್ಟ; ಎನ್‌.ಚಲುವರಾಯಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 13:19 IST
Last Updated 22 ಅಕ್ಟೋಬರ್ 2020, 13:19 IST

ಮಂಡ್ಯ: ‘ರಾಜ್ಯದಲ್ಲಿ ಈಗಾಗಲೇ ಮೂರು ಬಾರಿ ಅತಿವೃಷ್ಟಿ ಸಂಭವಿಸಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಪಕ್ಷ ಹಾಗೂ ರಾಜಕಾರಣವನ್ನು ಮೀರಿ ರಾಜ್ಯದ ಸಂಸದರು ಕೇಂದ್ರದಿಂದ ಪರಿಹಾರ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅತಿವೃಷ್ಟಿಯ ಕಾರಣದಿಂದ ₹ 20 ಸಾವಿರ ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಕಳೆದ ಬಾರಿಯ ಅತಿವೃಷ್ಟಿಯ ಪರಿಹಾರವೇ ಇನ್ನೂ ಬಂದಿಲ್ಲ. ಈ ಬಾರಿಯೂ ನೆರವಿನ ಹಸ್ತ ನೀಡದಿದ್ದರೆ ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವಾ ಏನ್ನುವ ಪ್ರಶ್ನೆ ಮೂಡುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈಗಾಗಲೇ ಕೇಂದ್ರ ಸರ್ಕಾರ ಜಿಎಸ್‌ಟಿ ವಿಚಾರಕ್ಕೆ ಸಂಬಂಧಿಸಿದಂತೆ ನೆರವು ನೀಡುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದೆ. ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಇದೆ ಪ್ರತಿಕ್ರಿಯೆ ಬಂದರೆ ಪಕ್ಷ ರಾಜಕಾರಣದ ಮರ್ಜಿ ಬಿಟ್ಟು ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಶಿರಾ ಹಾಗೂ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಬೇಕು. ಈ ಕ್ಷೇತ್ರಗಳ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ ಆಗಲಾರದು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಬಿಜೆಪಿ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸಿಎಂ ಕುರ್ಚಿಗೆ ಯಾವುದೇ ತೊಂದರೆ ಆಗುವುದಿಲ್ಲ, ಆದರೆ ಮುಂದಿನ ಚುನಾವಣೆಗೆ ಇದು ಭದ್ರ ಅಡಿಪಾಯವಾಗುತ್ತದೆ. ಒಂದು ವೇಳೆ ಸರ್ಕಾರ ಪತನವಾದರೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನೇರವಾಗಿ ಚುನಾವಣೆ ಎದುರಿಸುತ್ತೇವೆ ’ ಎಂದರು.

‘ಜಿಲ್ಲೆಯಲ್ಲಿ ಸಹಕಾರ ಸಂಘದ ಚುನಾವಣೆಗಳು ಬರುತ್ತಿದ್ದು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಕೆ ಆರ್ ಪೇಟೆಯಲ್ಲಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಅವರ ಕುಟುಂಬಕ್ಕೆ ಸೇರಿದ ಕಟ್ಟಡಗಳನ್ನು ತೆರವುಗೊಳಿಸಿರುವುದು ಸರಿಯಲ್ಲ. ತೆರವು ಮಾಡುವುದಕ್ಕೂ ಮುನ್ನ ನೋಟಿಸ್ ನೀಡಬೇಕು, ಅಕ್ಕಪಕ್ಕದವರ ಸಮಕ್ಷಮದಲ್ಲಿ ಅಳತೆ ಮಾಡಿಸಬೇಕು. ಆದರೆ ಯಾವುದನ್ನೂ ಮಾಡದೆ ಏಕಾಏಕಿ ತೆರವುಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಲಾಗಿದೆ’ ಎಂದರು.

ಕಾಂಗ್ರೆಸ್ ಮುಖಂಡರಾದ ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ. ಗಂಗಾಧರ್, ನಗರ ಘಟಕದ ಅಧ್ಯಕ್ಷ ರುದ್ರಪ್ಪ, ರಾಮು ಇದ್ದರು.

ಮೈಷುಗರ್‌: ನ.3ಕ್ಕೆ ಮುಖ್ಯಮಂತ್ರಿ ಭೇಟಿ

‘ಮೈಷುಗರ್ ವಿಚಾರಕ್ಕೆ ಸಂಬಂಧಿಸಿದಂತೆ ನ.3ರ ನಂತರ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೂಡಲೇ ಕಾರ್ಖಾನೆ ಆರಂಭಿಸುವಂತೆ ಮನವಿ ಮಾಡಲಾಗುವುದು’ ಎಂದು ಚಲುವರಾಯಸ್ವಾಮಿ ಹೇಳಿದರು.

‘ಕೆಲವರು ಒ ಅಂಡ್‌ ಎಂ ಮಾದರಿಯಲ್ಲಿ ಕಾರ್ಖಾನೆ ಆರಂಭಿಸಲು ಒತ್ತಾಯಿಸುತ್ತಿದ್ದಾರೆ. ಇನ್ನೂ ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಸಿ ಎಂದು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಂಡು ಶೀಘ್ರ ಕಾರ್ಖಾನೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.