ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದರೂ ನಾಲೆಗಳಿಗೆ ನೀರು ಹರಿಸದ ಕಾರಣ ತಾಲ್ಲೂಕಿನ ವಿವಿಧೆಡೆ ಕಬ್ಬು, ಅಡಿಕೆ, ಬಾಳೆ, ತೆಂಗು ಇತರ ಬೆಳೆಗಳು ಒಣಗುತ್ತಿವೆ.
ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿಪರ್ಯಾಸವೆಂದರೆ ಈ ನದಿಯ ದಡದಲ್ಲಿರುವ ಕೃಷಿ ಜಮೀನುಗಳಿಗೆ ನೀರಿಲ್ಲದ ಸ್ಥಿತಿ ಬಂದೊದಗಿದೆ. ಕೊಡಗು ಭಾಗದಲ್ಲಿ ಧೋ... ಎಂದು ಮಳೆ ಸುರಿಯುತ್ತಿದ್ದರೆ ಈ ಭಾಗದಲ್ಲಿ ಒಂದೂವರೆ ತಿಂಗಳಿನಿಂದ ಸಮಪರ್ಕವಾಗಿ ಮಳೆಯೇ ಬಿದ್ದಿಲ್ಲ. ಆಗೊಮ್ಮೆ ಈಗೊಮ್ಮೆ ಸೋನೆ ಸುರಿದಿದ್ದು ಬಿಟ್ಟರೆ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುವಂತಹ ಮಳೆ ಬಿದ್ದಿಲ್ಲ. ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರನ್ನೂ ಬಿಟ್ಟಿಲ್ಲ. ಇದರಿಂದಾಗಿ ಕಾಲುವೆ ಆಶ್ರಿತ ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ವಿಶ್ವೇಶ್ವರಯ್ಯ ನಾಲೆಯ 24ನೇ ವಿತರಣಾ ನಾಲೆ ವ್ಯಾಪ್ತಿಯಲ್ಲಿ ನೂರಾರು ಎಕರೆ ಕಬ್ಬು ಇತರ ಬೆಳೆಗಳಿವೆ. ಸಬ್ಬನಕುಪ್ಪೆ, ಗೌಡಹಳ್ಳಿ, ಟಿ.ಎಂ. ಹೊಸೂರು, ಎಂ. ಶೆಟ್ಟಹಳ್ಳಿ ಭಾಗದಲ್ಲಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಈಗಾಗಲೇ ಶೇ 20ರಷ್ಟು ಬೆಳೆ ಬಾಡಿ ಹೋಗಿದೆ. ತಕ್ಷಣ ನೀರುಣಿಸದಿದ್ದರೆ ಮತ್ತಷ್ಟು ಒಣಗುತ್ತದೆ. ನೀರಾವರಿ ನಿಗಮದ ಅಧಿಕಾರಿಗಳಿಗೆ ಸಮಸ್ಯೆ ಹೇಳಿಕೊಂಡರೂ ನೀರು ಬಿಡುತ್ತಿಲ್ಲ’ ಎಂದು ಸಬ್ಬನಕುಪ್ಪೆ ರೈತರಾದ ಎಸ್.ಎಂ. ಮಲ್ಲೇಶ್, ಹೊನ್ನೇಗೌಡ, ಪುಟ್ಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾವೇರಿ ನದಿ ಒಡ್ಡಿನ ನಾಲೆಯಾದ ಚಿಕ್ಕದೇವರಾಯಸಾಗರ (ಸಿಡಿಎಸ್) ನಾಲೆಗೂ ನೀರು ಬಿಟ್ಟಿಲ್ಲ. ಕಬ್ಬು ಬೆಳೆಯಲು ರೈತರು ಸಾಕಷ್ಟು ಖರ್ಚು ಮಾಡಿದ್ದಾರೆ. ನೀರಿನ ಕೊರತೆಯಿಂದ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಎಂಜಿನಿಯರ್‌ಗಳು ಕಾಮಗಾರಿಯ ನೆಪ ಹೇಳುತ್ತಿದ್ದಾರೆ. ಜಲಾಶಯ ತುಂಬಿ ತುಳುಕುತ್ತಿದ್ದರೂ ನಾಲೆಗೆ ನೀರು ಬಿಡಲು ಮೀನ ಮೇಷ ಎಣಿಸುತ್ತಿದ್ದಾರೆ. ಜನಪ್ರತಿನಿಧಿಗಳೂ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಎಸ್.ಸಿ. ಪ್ರವೀಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳಿಗೆ ನೀರು ಹರಿಸಲು ಆಗಿಲ್ಲ. ಸಿಡಿಎಸ್ ನಾಲೆಯ ದುರಸ್ತಿ ಕಾರ್ಯ ಕೂಡ ಪ್ರಗತಿಯಲ್ಲಿದೆ. ನೀರು ಹರಿಸಿದರೆ ಕಾಮಗಾರಿ ಸ್ಥಗಿತಗೊಳಿಸಬೇಕಾಗುತ್ತದೆ. ಕಾಮಗಾರಿ ಮುಗಿದ ನಂತರ ನೀರು ಹರಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.