ಮಂಡ್ಯ: ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಿಮ್ಸ್ ಆಸ್ಪತ್ರೆ ಎದುರು ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು, ಡಿಎಸ್‌ಎಸ್, ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘ, ಸಿಪಿಐ(ಎಂ), ನಾವು ದ್ರಾವಿಡ ಕನ್ನಡಿಗ ಸಂಘ ಹಾಗೂ ಕನ್ನಡ ಸೇನೆ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಬಾಲಕಿಯ ಕುಟುಂಬದವರೊಡನೆ ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಜಮಾವಣೆಗೊಂಡು ವೈದ್ಯರು ಹಾಗೂ ಮಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ದರ್ಶನ್ ವಿರುದ್ಧವು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ವಿವರ:
ಮಳವಳ್ಳಿ ತಾಲ್ಲೂಕಿನ ನೆಲ್ಲೂರು ಗ್ರಾಮದ ಬಾಲಕಿ ಸಾನ್ವಿ (7)ಗೆ ಟೈಲ್ಸ್ ಬಿದ್ದು ಸಾನ್ವಿಯ ಪಾದದ ಮೂಳೆ ಮುರಿದಿತ್ತು. ತಂದೆ ನಿಂಗರಾಜು ಮೇ 29ರಂದು ಮಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಎಲ್ಲಾ ಪರೀಕ್ಷೆಯನ್ನು ನಡೆಸಿದ ವೈದ್ಯರು ಅಂದು ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ಮಾಡಿ ನಂತರ ವಾರ್ಡ್‌ಗೆ ಸ್ಥಳಾಂತರಿಸಿದ್ದರು. ಮೇ 30ರಂದು ಬೆಳಿಗ್ಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಮೇ 31ರಂದು ಬೆಳಿಗ್ಗೆ ಡ್ರಿಪ್ ಮೂಲಕ ಬಾಲಕಿಗೆ ಔಷಧ ನೀಡುತ್ತಿದ್ದಂತೆ ಬಾಲಕಿ ಸಾನ್ವಿ ಪ್ರಜ್ಞಾಹೀನ ಸ್ಥಿತಿ ತಲುಪಿದಳು. ರಾತ್ರಿ 10.30ರ ವೇಳೆಗೆ ಬಾಲಕಿಯ ಸಾವಿನ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದರು.
‘ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಬಾಲಕಿ ಸಾವಿಗೆ ಕಾರಣ, ವೈದ್ಯರ ನಿರ್ಲಕ್ಷ್ಯದಿಂದ ಸಾನ್ವಿ ಸಾವನ್ನಪ್ಪಿದ್ದಾಳೆ. ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನಮಗೆ ಮಾಹಿತಿ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿರುವುದನ್ನು ನೋಡಿದರೆ ವೈದ್ಯರು ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಡಾ.ದರ್ಶನ್ ವಿರುದ್ಧ ಕಿಡಿ:
ಚಿಕಿತ್ಸೆ ನೀಡಿದ ಮಿಮ್ಸ್ ಆಸ್ಪತ್ರೆ ವೈದ್ಯ ಡಾ.ದರ್ಶನ್ ಅವರು, ಬಾಲಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿಲ್ಲ. ಅಂಗಾಂಗ ವೈಫಲ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ. ಬೇಕಾದರೆ ಎಲ್ಲಿ ಬೇಕಾದರೂ ಮರಣೋತ್ತರ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರೂ ಪ್ರತಿಭಟನಾಗಾರರು ಡಾ.ದರ್ಶನ್ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಂಗಾಂಗ ವೈಫಲ್ಯವೆಂದು ಸುಳ್ಳು ದಾಖಲೆ ಸೃಷ್ಟಿ:
‘ಬಾಲಕಿಗೆ ಅಂಗಾಂಗ ವೈಫಲ್ಯವಿತ್ತು ಎಂದು ವೈದ್ಯರು ಸುಳ್ಳು ದಾಖಲೆ ಸೃಷ್ಟಿಸಿದ್ದು, ಅಂಗಾಂಗ ವೈಫಲ್ಯವಿರುವುದಾಗಿ ಸಹಿ ಮಾಡುವಂತೆ ವೈದ್ಯರು ಒತ್ತಾಯಿಸಿದರು. ಇಲ್ಲವಾದರೆ ಮೃತದೇಹ ನೀಡಲ್ಲ ಎಂದು ಧಮ್ಕಿ ಹಾಕಿದರು’ ಎಂದು ತಂದೆ ನಿಂಗರಾಜು ಗಂಭೀರ ಆರೋಪ ಮಾಡಿದರು.
ಸ್ಥಳಕ್ಕೆ ಎಸ್ಪಿ ದೌಡು, ಎಫ್‌ಐಆರ್ ದಾಖಲು:
‘ವಿಷಯ ಗಂಭೀರತೆ ಪಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರತಿಭಟನಾಕಾರರ ಮನವೊಲಿಸಿದರು. ಬಾಲಕಿಯ ಶವವನ್ನು ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಯಿತು. ವೈದ್ಯರ ವಿರುದ್ಧ ಎಫ್ಐಆರ್ ದಾಖಲಾದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ಮಿಮ್ಸ್‌ನ ಬಹುತೇಕ ವೈದ್ಯರು ಖಾಸಗಿ ಕ್ಲಿನಿಕ್ ಇಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಮಿಮ್ಸ್‌ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಮಗುವ ಸಾವಿಗೆ ಮಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಮಗು ಕುಟುಂಬಕ್ಕೆ ಪರಿಹಾರ ನೀಡಬೇಕು. ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಎಂ.ವಿ.ಕೃಷ್ಣ, ಎನ್.ಎಲ್.ಭರತ್‌ರಾಜ್, ಬಿ.ಹನುಮೇಶ್, ಚಂದ್ರಶೇಖರ್, ಆರ್.ರಾಜು, ನರಸಿಂಹಮೂರ್ತಿ, ಅಭಿಗೌಡ, ಮಂಜುನಾಥ್, ಸುಶೀಲಾ, ಲಕ್ಷ್ಮಿ, ಡಿ.ಕೆ.ಲತಾ, ಮಹದೇವಮ್ಮ, ಪುಟ್ಟಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.