ADVERTISEMENT

‘ಜೀವಪರ ಸಾಹಿತ್ಯ ಓದಿನಿಂದ ಮನಪರಿವರ್ತನೆ’

‘ನೆರಳಿಗೂ ಕಾವಲಿರುವೆ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 16:34 IST
Last Updated 3 ಅಕ್ಟೋಬರ್ 2020, 16:34 IST
ಪಾಂಡವಪುರದಲ್ಲಿ ಎಚ್.ಬಿ.ಶಂಕರಾನಂದ ಅವರ ‘ನೆರಳಿಗೂ ಕಾವಲಿರುವೆ’ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು
ಪಾಂಡವಪುರದಲ್ಲಿ ಎಚ್.ಬಿ.ಶಂಕರಾನಂದ ಅವರ ‘ನೆರಳಿಗೂ ಕಾವಲಿರುವೆ’ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು   

ಪಾಂಡವಪುರ: ಜೀವಪರ ಸಾಹಿತ್ಯದ ಓದಿನಿಂದ ಮನ ಪರಿವರ್ತನೆಯಾಗಿ ಗಟ್ಟಿಯಾದ ವ್ಯಕ್ತಿತ್ವ ರೂಪುಗೊಂಡು ಚೈತನ್ಯಶೀಲ ಗುಣ ಇಮ್ಮಡಿಯಾಗುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಹೇಳಿದರು.

ಪಟ್ಟಣದ ರಿದಮ್‌ ಆಫ್‌ ಡ್ಯಾನ್ಸ್‌ ಸ್ಕೂಲಿನಲ್ಲಿ ತಾಲ್ಲೂಕು ಯುವ ಬರಹಗಾರರ ಬಳಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗಾಂಧಿ ಸಂಸ್ಮರಣೆ, ಕವಿಗೋಷ್ಠಿ ಹಾಗೂ ‘ನೆರಳಿಗೂ ಕಾವಲಿರುವೆ’ ಪುಸ್ತಕ ಬಿಡುಗಡೆ ಸಮಾರಂಭ ಉದ್ಫಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಜಾನ್‌ ರಸ್ಕಿನ್‌ ಕೃತಿ ‘ಅನ್‌ಟುದಿಸ್‌ ಲಾಸ್ಟ್‌‘ ಪುಸ್ತಕ ಓದಿ ಮನ ಪರಿವರ್ತನೆ ಹೊಂದಿ ಸಮಾಜಮು ಖಿಯಾದದ್ದು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಈ ಸಮಾಜದಲ್ಲಿ ಅಸಂಖ್ಯಾ ಗಾಂಧಿ ಸ್ಮಾರಕಗಳಿವೆ. ಪ್ರತಿಮೆಗಳಿವೆ, ರಸ್ತೆಗಳಿವೆ ಆದರೆ, ಗಾಂಧಿ ಪ್ರತಿಪಾದಿಸಿದ ತತ್ವ, ಸಿದ್ಧಾಂತ, ವಿಚಾರಗಳು ಕಡೆಗಣನೆಯಾಗಿವೆ ಎಂದು ವಿಷಾದಿಸಿದರು.

ADVERTISEMENT

ಸಮಾರಂಭದ ಅಧ್ಯಕ್ಷ ವಹಿಸಿದ್ದ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಕವಿಗಳು ವರ್ತಮಾನದ ತಲ್ಲಣಗಳಿಗೆ, ವಿದ್ಯಮಾನಗಳಿಗೆ ದನಿಯಾಗಿ ಸ್ಪಂದಿಸುವ ಬರವಣಿಗೆ ಮಾಡಬೇಕಿದೆ ಎಂದರು.

ಮೈಸೂರು ವಿ.ವಿ.ಯ ಸಿಂಡಿಕೇಟ್‌ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ ಅವರು ಯುವ ಸಾಹಿತಿ ಎಚ್.ಬಿ.ಶಂಕರಾನಂದ ಹಿರೇಮರಳಿ ಅವರ ‘ನೆರಳಿಗೂ ಕಾವಲಿರುವೆ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಮಂಡ್ಯ ಪ್ರದೇಶಿಕ ಕೇಂದ್ರದ ಕನ್ನಡ ಉಪನ್ಯಾಸಕಿ ಡಾ.ಎನ್.ರಮ್ಯ ಕೃತಿ ಕುರಿತು ಮಾತನಾಡಿದರು. ಸುಮಾರು 15 ಮಂದಿ ಕವಿ–ಕವಿಯತ್ರಿಯರು ತಮ್ಮ ಕವಿತೆಗಳನ್ನು ವಾಚನ ಮಾಡಿದರು.

ಕಲಾವಿದ ಪ್ರತಾಪ್‌ ಮತ್ತು ನಾಗಲಿಂಗೇಗೌಡರ ತಂಡ ಜಾನಪದ ಗೀತಾ ಗಾಯನ ನಡೆಸಿಕೊಟ್ಟರು. ವೇದಿಕೆಯಲ್ಲಿ ಸಾಹಿತಿ ಎಚ್.ಬಿ.ಶಂಕರನಾಂದ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್‌, ಯುವ ಬರಹಗಾರರ ಬಳಗದ ತಾ‌ಲ್ಲೂಕು ಘಟಕದ ಅಧ್ಯಕ್ಷ ರಂಗನಾಥ ಕ್ಯಾತನಹಳ್ಳಿ, ಕೆಇಬಿ.ಗುತ್ತಿಗೆದಾರ ಎಂ.ಎಲ್.ಲೋಕೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.