ಮಳವಳ್ಳಿ ಪಟ್ಟಣದ ಶೆಟ್ಟಹಳ್ಳಿ ರಸ್ತೆಯಲ್ಲಿ ಬಿ.ಎಂ. ಎಜುಕೇಷನಲ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಿ.ಎಂ.ಪಬ್ಲಿಕ್ ಸ್ಕೂಲ್ ನ ಉದ್ಘಾಟನಾ ಸಮಾರಂಭವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.
ಮಳವಳ್ಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕ ಹಾಗೂ ಪದವಿಗೆ ಮಾತ್ರ ಬೆಲೆ ಸಿಗಲಿದ್ದು, ಇಂದು ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪಟ್ಟಣದ ಹೊರವಲಯದ ಶೆಟ್ಟಹಳ್ಳಿ ರಸ್ತೆಯಲ್ಲಿ ಬಿ.ಎಂ. ಎಜುಕೇಷನಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಬಿ.ಎಂ. ಪಬ್ಲಿಕ್ ಸ್ಕೂಲ್ ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಎಷ್ಟೇ ಹಣ ಮಾಡಿದರೂ ಬೆಲೆ ಇರುವುದಿಲ್ಲ, ಗುಣಾತ್ಮಕ ಶಿಕ್ಷಣ ನೀಡುವುದರಿಂದ ಪ್ರತಿಯೊಬ್ಬ ರೈತನ ಮಗನೂ ಉನ್ನತ ವಿದ್ಯಾಭ್ಯಾಸ ಕೊಡಿಸಬಹುದು. ಶಿಕ್ಷಣದಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆ ಆರಂಭಿಸುವುದು ಸುಲಭದ ಮಾತಲ್ಲ, ತಂದೆ, ತಾಯಿ, ಗುರು ಹಿರಿಯರು, ಹಾಗೂ ಗ್ರಾಮದ ಋಣ ತೀರಿಸುವ ಉದ್ದೇಶದಿಂದ ನಿವೃತ್ತ ಅಧಿಕಾರಿ ಎಂ.ರಾಮಕೃಷ್ಣ ಅವರು ಸಿಬಿಎಸ್‌ಇ ಪಠ್ಯಕ್ರಮದ ಶಾಲೆ ಆರಂಭಿಸಿರುವುದು ಉತ್ತಮ ಬೆಳೆವಣಿಗೆಯಾಗಿದೆ’ ಎಂದು ಶ್ಲಾಘಿಸಿದರು.
ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ‘ಸೇವಾ ಮನೋಭಾವದ ದೃಷ್ಟಿಯಿಂದ ತನ್ನ ಸ್ವಂತ ಹಣವನ್ನು ಶಿಕ್ಷಣ ಸಂಸ್ಥೆಗೆ ವಿನಿಯೋಗಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ನಿವೃತ್ತ ಜೀವನದ ನಂತರ ಸಾರ್ವಜನಿಕ ಸೇವೆಗೆ ಹೋಗುವವರ ಸಂಖ್ಯೆ ವಿರಳ, ಎಂ.ರಾಮಕೃಷ್ಣ ಅವರು ಲಾಭ ನಷ್ಟವನ್ನು ನೋಡದೇ ಹುಟ್ಟಿದ ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸೇವೆ ಮಾಡುವ ಹಂಬಲವನ್ನು ಹೊಂದಿದ್ದಾರೆ. ಶಿಕ್ಷಣ ಎಂಬುವುದು ಸೇವೆಗಿಂತ ದೊಡ್ಡದು’ ಎಂದರು.
ಟ್ರಸ್ಟ್ ಕಾರ್ಯದರ್ಶಿ ಎಂ.ರಾಮಕೃಷ್ಣ ಪ್ರಾಸ್ತವಿಕವಾಗಿ ಮಾತನಾಡಿ, ‘22 ವರ್ಷಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ಅನೇಕ ಅವಕಾಶಗಳನ್ನು ಪಡೆದು ಜನರ ಸೇವೆ ಮಾಡಿ ನಮ್ಮ ತಂದೆ-ತಾಯಿಯ ಆಸೆಯಂತೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ತೆರೆಯಲಾಗಿದೆ. ಹಳ್ಳಿಗಾಡಿನ ಮಕ್ಕಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪೈಪೋಟಿ ನೀಡುವಂಥ ಮಟ್ಟಕ್ಕೆ ಬೆಳೆಯಬೇಕು ಎಂಬ ಧ್ಯೇಯ ಹೊಂದಿ ತಾಲ್ಲೂಕಿನಲ್ಲಿಯೇ ಮೊದಲ ಸಿಬಿಎಸ್ಇ ಮಾಧ್ಯಮದಲ್ಲಿ ಶಾಲೆ ತೆರಯಲಾಗಿದೆ’ ಎಂದು ಹೇಳಿದರು.
ಸಮಾರಂಭದ ಸಾನಿದ್ಯ ವಹಿಸಿ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ‘ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರ ಇರಬೇಕು. ಆ ನಿಟ್ಟಿನಲ್ಲಿ ಸುಧಾರಣೆಗೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ.ಎಂ. ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಶಂಕರಲಿಂಗೇಗೌಡ ನಮ್ಮ ಶಾಲೆಯ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಲಾಗುವುದು’ ಎಂದು ಹೇಳಿದರು.
ಇದಕ್ಕೂ ಮುನ್ನ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಾಯಿಬಾಬಾ ಮಂದಿರವನ್ನು ಡಿ.ಕೆ.ಶಿವಕುಮಾರ್ ಲೋಕಾರ್ಪಣೆಗೊಳಿಸಿದರು. ನಂತರ ಪೂಜೆ ಸಲ್ಲಿಸಿದ ಅವರು ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಶಾಲಾ ಆಡಳಿತ ಮಂಡಳಿಯ ಕಚೇರಿಯನ್ನು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸಿದರು.
ತುಮಕೂರಿನ ರಾಮಕೃಷ್ಣ ವಿವೇಕಾನಂದರ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಆರ್ಶೀವಚನ ನೀಡಿದರು.
ಎಚ್.ಡಿ. ರಂಗನಾಥ್, ಕೆ.ಎಂ. ಉದಯ್, ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.