ಮಂಡ್ಯ: ರಾಜ್ಯದಲ್ಲಿನ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ಈಗಾಗಲೇ ಹಲವು ಪ್ರತಿಭಟನಾ ಹೋರಾಟಗಳನ್ನು ನಡೆಸಿ, ಇಲಾಖೆಯ ಅಧಿಕಾರಿಗಳನ್ನು, ಸಚಿವರನ್ನು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಕೆಜಿಐಪಿ ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸುವುದು, ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ಟೈಮ್ ಸ್ಕಿಲ್ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ವಿಲೀನ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಲಾಗಿದೆ ಎಂದು ಹೇಳಿದರು.
ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಮೇ 3ರಂದು ಮಂಡ್ಯ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು. 15 ದಿನಗಳ ಒಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯದಾದ್ಯಂತ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರನೌಕರರು ಕೆಲಸ ಮಾಡುವುದನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಶಾಖೆಯ ಅಧ್ಯಕ್ಷ ಮಹದೇವು, ಗೌರವ ಅಧ್ಯಕ್ಷ ನಂಜುಂಡ, ಉಪಾಧ್ಯಕ್ಷ ಚಂದ್ರ, ಸೋಮಸುಂದರ್, ಹರೀಶ್, ಲಿಂಗಮಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.