ADVERTISEMENT

ಇಂದಿರಾ ಕ್ಯಾಂಟೀನ್‌ ಮೇಲೆ ಹೊಸ ಭರವಸೆ

ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆಯೇ ಕ್ಯಾಂಟೀನ್‌ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 27 ಮೇ 2023, 23:43 IST
Last Updated 27 ಮೇ 2023, 23:43 IST
ಮಂಡ್ಯದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸೇವಿಸುತ್ತಿರುವ ಕುಟುಂಬ ಸದಸ್ಯರು
ಮಂಡ್ಯದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸೇವಿಸುತ್ತಿರುವ ಕುಟುಂಬ ಸದಸ್ಯರು   

ಮಂಡ್ಯ: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ, ತಿಂಡಿಗಾಗಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಜೊತೆ ಕ್ಯಾಂಟೀನ್‌ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು, ಕೆಲಸ ಮಾಡುವ ಕಾರ್ಮಿಕರಲ್ಲೂ ಹೊಸ ಭರವಸೆ ಮೂಡಿದೆ.

ಇಂದಿರಾ ಕ್ಯಾಂಟೀನ್‌ ಶ್ರೇಯ ಕಾಂಗ್ರೆಸ್‌ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರಿಗೆ ದೊರೆಯುತ್ತದೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಯನ್ನು ನಿರ್ಲಕ್ಷ್ಯ ಮಾಡಿತ್ತು. ಸಮರ್ಪಕವಾಗಿ ನಿರ್ವಹಣಾ ವೆಚ್ಚ ಬಿಡುಗಡೆ ಮಾಡದ ಕಾರಣ ಕಾರ್ಮಿಕರು ಇಂದಿರಾ ಕ್ಯಾಂಟೀನ್‌ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆತಂಕ, ಅಭದ್ರತೆ ನಡುವೆಯೇ ಕ್ಯಾಂಟೀನ್‌ಗಳು ನಡೆಯುತ್ತಿದ್ದವು.

ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕ್ಯಾಂಟೀನ್‌ ಮೇಲಿನ ಭರವಸೆ ಹೆಚ್ಚಾಗಿದೆ. ಕಾರ್ಮಿಕರ ಆತಂಕ, ಅಭದ್ರತೆ ಮಾಯವಾಗಿದೆ. ಜೊತೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ, ಚಪಾತಿ ನೀಡುವುದಾಗಿ ಸರ್ಕಾರ ಹೇಳಿರುವ ಕಾರಣ ಇಂದಿರಾ ಕ್ಯಾಂಟೀನ್‌ಗಳು ಮತ್ತಷ್ಟು ಜನರನ್ನು ಆಕರ್ಷಣೆ ಮಾಡುತ್ತಿವೆ. ಮುದ್ದೆ, ಚಪಾತಿ ವಿತರಣೆ ಬಗ್ಗೆ ಇಲ್ಲಿಯವರೆಗೂ ಯಾವುದೇ ಸೂಚನೆ ಬಂದಿಲ್ಲ. ಆದರೂ ಕ್ಯಾಂಟೀನ್‌ಗೆ ಹೆಚ್ಚು ಜನರು ಬರುತ್ತಿದ್ದಾರೆ.

ADVERTISEMENT

ನಗರದಲ್ಲಿರುವ 2 ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರು ಆಹಾರ ಸೇವನೆ ಮಾಡುತ್ತಿದ್ದಾರೆ. ಸಂಜಯ ವೃತ್ತ, ಮಿಮ್ಸ್‌ ಆಸ್ಪತ್ರೆ ಎದುರು ಇರುವ ಕ್ಯಾಂಟೀನ್‌ಗಳಿಗೆ ಮೊದಲಿನಿಂದಲೂ ಜನರ ಕೊರತೆ ಇಲ್ಲ. ಹಳ್ಳಿಗಳಿಂದ ಬರುವ ಜನರು ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ಸಾಲುಗಟ್ಟಿ ನಿಲ್ಲುತ್ತಾರೆ. ರಾತ್ರಿಯ ವೇಳೆ ಜನರ ಕೊರತೆ ಇತ್ತು, ಈಚೆಗೆ ರಾತ್ರಿ ಹೊತ್ತಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

ಆಹಾರ ಪೂರೈಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದ್ದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮಿಮ್ಸ್‌ ಎದುರು ಇರುವ ಕ್ಯಾಂಟೀನ್‌ಗೆ ರೋಗಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಂಜಯ ವೃತ್ತದಲ್ಲಿರುವ ಕ್ಯಾಂಟೀನ್‌ಗೂ ಹಳ್ಳಿಗಳಿಂದ ಬರುವ ಜನರು ಆಹಾರ ಸೇವಿಸುತ್ತಾರೆ. ಎಂಜಿನಿಯರಿಂಗ್‌ ಓದುವ ವಿದ್ಯಾರ್ಥಿಗಳು ಕೂಡ ಇಲ್ಲಿ ಬಂದು ಊಟ ಸೇವಿಸುತ್ತಾರೆ.

ನಗರದ ಸಂಜಯ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮೊದಲು ಬೆಳಿಗ್ಗೆ 500 ಮಂದಿ ತಿಂಡಿಗೆ ಬರುತ್ತಿದ್ದರು. ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ತಿಂಡಿ ಸೇವನೆ ಮಾಡುವವರ ಸಂಖ್ಯೆ 800ಕ್ಕೆ ಏರಿಕೆಯಾಗಿದೆ. ಮೊದಲು ಮಧ್ಯಾಹ್ನ 250 ಜನರು ಊಟ ಮಾಡುತ್ತಿದ್ದರು, ಈಗ ಆ ಸಂಖ್ಯೆ 450ಕ್ಕೆ ಏರಿಕೆಯಾಗಿದೆ. ರಾತ್ರಿ ಊಟಕ್ಕೆ 100 ಜನರಷ್ಟೇ ಬುರುತ್ತಿದ್ದರು, ಈಗ ಆ ಸಂಖ್ಯೆ 200ಕ್ಕೆ ಏರಿಕೆಯಾಗಿದೆ.

‘ಬಿಜೆಪಿ ಆಡಳಿತವಿದ್ದಾಗ ಇಂದಿರಾ ಕ್ಯಾಂಟೀನ್‌ ನಡೆಯುತ್ತಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಹೀಗಾಗಿ ನಾನೂ ಬರುವುದನ್ನೇ ನಿಲ್ಲಿಸಿದ್ದೆ. ಆದರೆ ಈಗ ಕಾಂಗ್ರೆಸ್‌ ಸರ್ಕಾರ ಬಂದಿದ್ದು ಇಂದಿರಾ ಕ್ಯಾಂಟೀನ್‌ ಸಾಕಷ್ಟು ಅನುದಾನ ಬರಲಿದೆ. ಹೀಗಾಗಿ ನಾನೂ ಊಟಕ್ಕೆ ಬರುತ್ತಿದ್ದೇನೆ’ ಎಂದು ನಗರದ ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ಹೇಳಿದರು.

ತಾಲ್ಲೂಕು ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್‌ ಗ್ರಾಹಕಸ ಸಂಖ್ಯೆ ಹೆಚ್ಚಾಗಿದೆ. ನಾಗಮಂಗಲ ಪಟ್ಟಣದ‌ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಕಾರ್ಯ ನಿರ್ವಹಿಸುತ್ತಿದ್ದು, ಬೆಳಿಗ್ಗೆ ತಿಂಡಿ, ಮಧ್ಯಾಹ್ನಕ್ಕೆ ಅನ್ನ ಸಂಬಾರ್, ರಾತ್ರಿ ಅನ್ನ ಸಾಂಬಾರ್ ನೀಡಲಾಗುತ್ತಿದೆ.

ನಿತ್ಯ 350 ಕ್ಕೂ ಹೆಚ್ಚು ಜನರಿಗೆ ಊಟ ತಿಂಡಿ ಮಾಡಲಾಗುತ್ತಿದೆ. ಕ್ಯಾಂಟೀನ್ ಪಟ್ಟಣದ ಆಸ್ಪತ್ರೆ ಮತ್ತು ಸರ್ಕಾರಿ ಕಾಲೇಜಿನ ಬಳಿ ಇರುವುದರಿಂದ ದಿನನಿತ್ಯ ಹೆಚ್ಚು ಸಂಖ್ಯೆಯಲ್ಲಿ ರೋಗಿಗಳು, ಅವರ ಸಂಬಂಧಿಕರು ಕ್ಯಾಂಟೀನ್‌ಗೆ ಬರುತ್ತಾರೆ. ಜೊತೆಗೆ ಇಂದಿರಾ ಕ್ಯಾಂಟೀನ್ ಸೌಲಭ್ಯವು ವಿದ್ಯಾರ್ಥಿಗಳಿಗೂ ದೊರೆತಿದೆ.

ಪಾಂಡವಪುರ ಪಟ್ಟಣದ‌ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‌ ನಡೆಯುತ್ತಿದೆ. 300ಕ್ಕೂ ಹೆಚ್ಚು ಜನರು ಇಲ್ಲಿ ಊಟ ಸೇವನೆ ಮಾಡುತ್ತಾರೆ. ಕಾಂಗ್ರೆಸ್‌ ಸರ್ಕಾರಕ್ಕೆ ಬಂದ ನಂತರ ಜನರ ಸಂಖ್ಯೆ ಹೆಚ್ಚಾಗಿದೆ. ‘ಕ್ಯಾಂಟೀನ್‌ ಪಟ್ಟಣದ ಹೃದಯದ ಭಾಗದಲ್ಲಿ ಇದ್ದಿದ್ದರೆ ಹೆಚ್ಚು ಗ್ರಾಹಕರು ಬರುತ್ತಿದ್ದರು. ಕಾಲೇಜು ಪ್ರಾರಂಭವಾದರೆ ವಿದ್ಯಾರ್ಥಿಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದು ವ್ಯವಸ್ಥಾಪಕ ಹೇಳಿದರು.

ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರು ಇಂದಿರಾ ಕ್ಯಾಂಟೀನ್‌ಗೆ ಬೆಳಿಗ್ಗೆ 150–180 ಮಂದಿ, ಮಧ್ಯಾಹ್ನ 200– 250 ಮಂದಿ ಹಾಗೂ ಸಂಜೆ 80– 120 ಮಂದಿ ಆಹಾರ ಸೇವಿಸುತ್ತಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ನಂತರ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಕೆ.ಆರ್. ಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಇಂದಿರಾ ಕ್ಯಾಂಟೀನ್ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಪ್ರತಿದಿನ ಒಟ್ಟು 350– 450 ಮಂದಿ ಆಹಾರ ಸೇವಿಸುತ್ತಿದ್ದರು. ಈಗ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

–ಪ್ರಜಾವಾಣಿ ತಂಡ: ಎಂ.ಎನ್‌.ಯೋಗೇಶ್‌, ಬಲ್ಲೇನಹಳ್ಳಿ ಮಂಜುನಾಥ್‌, ಗಣಂಗೂರು ನಂಜೇಗೌಡ, ಅಶೋಕ್‌ ಕುಮಾರ್‌, ಟಿ.ಕೆ.ಲಿಂಗರಾಜು, ಪ್ರಕಾಶ್‌ ಹಾರೋಹಳ್ಳಿ, ಉಲ್ಲಾಸ್‌

ಒಳಗೆ ಜಾಗ ಸಿಗದ ಕಾರಣ ಹೊರಗೇ ಊಟ ಸೇವಿಸುತ್ತಿರುವ ಗ್ರಾಹಕರು
ಮದ್ದೂರು ಪಟ್ಟಣದ ಇಂದಿರಾ ಕ್ಯಾಂಟೀನ್‌

ಜನಸಂದಣಿ ಇರುವ ಕಡೆಗಳಲ್ಲೇ ಕ್ಯಾಂಟೀನ್‌ ಸ್ಥಾಪನೆ ಆಸ್ಪತ್ರೆಗಳ ಬಳಿ ಕ್ಯಾಂಟೀನ್‌ಗೆ ಹೆಚ್ಚು ಗ್ರಾಹಕರು ಕ್ಯಾಂಟೀನ್‌ಗೆ ವಿದ್ಯಾರ್ಥಿಗಳಿಂದಲೂ ಬೇಡಿಕೆ

ಇಂದಿರಾ ಕ್ಯಾಂಟೀನ್‌ಗೆ ಜನ ಜಾಸ್ತಿ ಬಂದರೂ ಎಲ್ಲರಿಗೂ ಊಟ ತಿಂಡಿ ಸಿಗಲಿದೆ. ನಿತ್ಯ 1500 ಜನರಿಗೆ ಆಗುವಷ್ಟು ಆಹಾರ ಪದಾರ್ಥ ತಯಾರಿಸಲಾಗುತ್ತದೆ

–ಆರ್‌.ಮಂಜುನಾಥ್‌ ನಗರಸಭೆ ಪೌರಾಯುಕ್ತ

ಸರ್ಕಾರ ನೇವಾಗಿ ನಿರ್ವಹಿಸಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ಟೆಂಡರ್‌ ನೀಡುವ ಬದಲು ಸರ್ಕಾರವೇ ನೇರವಾಗಿ ನಿರ್ವಹಣೆ ಮಾಡಬೇಕು ಎಂದು ಕ್ಯಾಂಟೀನ್‌ಗಳ ಕಾರ್ಮಿಕರು ಒತ್ತಾಯಿಸಿದ್ದಾರೆ. ‘ಸರ್ಕಾರದ ಆಹಾರ ಇಲಾಖೆ ನೇರವಾಗಿ ನಿರ್ವಹಣೆ ಮಾಡಿದರೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಗುತ್ತಿಗೆದಾರ ಲಾಭದ ಹೆಚ್ಚು ಆದ್ಯತೆ ನೀಡುತ್ತಾರೆ ಆಗ ಆಹಾರ ಗುಣಮಟ್ಟ ಕಡಿಮೆಯಾಗುತ್ತದೆ ಜೊತೆಗೆ ಕಾರ್ಮಿಕರಿಗೂ ಭದ್ರತೆ ಇಲ್ಲದಂತಾಗುತ್ತದೆ. ಹೀಗಾಗಿ ಸರ್ಕಾರವೇ ನೇರವಾಗಿ ನಿರ್ವಹಣೆ ಮಾಡಬೇಕು’ ಎಂದು ಕಾರ್ಮಿಕರು ಆಗ್ರಹಿಸಿದರು.

ಮದ್ದೂರು; ನಿರ್ವಹಣೆ ಕೊರತೆ ಮದ್ದೂರು ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಈ ಕಟ್ಟಡ ಗಮನಿಸಿದರೆ ಸ್ಥಗಿತಗೊಂಡಿರುವಂತೆ ಕಾಣುತ್ತದೆ. ಆದರೆ ನಿತ್ಯ 400ಕ್ಕೂ ಹೆಚ್ಚು ಜನರು ಇಲ್ಲಿ ಊಟ ತಿಂಡಿ ಸೇವಿಸುತ್ತಾರೆ. ಕ್ಯಾಂಟೀನ್‌ ಗುತ್ತಿಗೆ ಪಡೆದವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಹಕರು ಆರೋಪಿಸುತ್ತಾರೆ. ‘ಮದ್ದೂರು ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇರುವುದಿಲ್ಲ ಊಟ ತಿಂಡಿಯನ್ನು ಇಂತಿಷ್ಟೇ ಎಂದು ಮಿತಿಗೊಳಿಸುತ್ತಾರೆ ಜೊತೆಗೆ ಗುಣಮಟ್ಟವೂ ಇರುವುದಿಲ್ಲ. ಸರ್ಕಾರ ಕೊಟ್ಟರೂ ಗುತ್ತಿಗೆದಾರರು ಕೊಡದಂತಹ ಪರಿಸ್ಥಿತಿ ಇದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಹಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.