ADVERTISEMENT

ಮಂಡ್ಯ: ಸ್ಫೂರ್ತಿ ತುಂಬುವ ಗುರು–ಶಿಷ್ಯ ಜೋಡಿ ನಡಿಗೆ

ಒಬ್ಬರಿಗೆ ಸಂಪೂರ್ಣ ಅಂಧತ್ವ, ಇನ್ನೊಬ್ಬರಿಗೆ ಕಿವಿ ಕೇಳದು– ಮಾತು ಬಾರದು

ಎಂ.ಎನ್.ಯೋಗೇಶ್‌
Published 28 ಮೇ 2022, 19:30 IST
Last Updated 28 ಮೇ 2022, 19:30 IST
ಪಿಇಟಿ ಕ್ರೀಡಾ ಸಮುಚ್ಚಯದಲ್ಲಿ ವಿಹಾರ ನಡೆಸುತ್ತಿರುವ ರವಿಕುಮಾರ್‌– ಹರ್ಷವರ್ಧನ ಜೋಡಿ
ಪಿಇಟಿ ಕ್ರೀಡಾ ಸಮುಚ್ಚಯದಲ್ಲಿ ವಿಹಾರ ನಡೆಸುತ್ತಿರುವ ರವಿಕುಮಾರ್‌– ಹರ್ಷವರ್ಧನ ಜೋಡಿ   

ಮಂಡ್ಯ: ಪಿಇಟಿ ಕ್ರೀಡಾ ಸಮುಚ್ಚಯದ ಆವರಣದಲ್ಲಿ ನಿತ್ಯ ನೂರಾರು ಜನರು ವಿಹಾರ ಮಾಡುತ್ತಾರೆ. ಆದರೆ, ಗುರು–ಶಿಷ್ಯ ಜೋಡಿಯೊಂದರ ಬಿರುಸಿನ ನಡಿಗೆ ಎಲ್ಲರ ಗಮನ ಸೆಳೆಯುತ್ತದೆ. ಗುರುವು ಶಿಷ್ಯನ ತೋಳು ಹಿಡಿದು ನಡೆಯುತ್ತಾರೆ. ಶಿಷ್ಯನಿಗೆ ಮಾತು ಬಾರದ– ಕಿವಿ ಕೇಳದ ಕಾರಣ ಆತನನ್ನು ಗುರು ಕೈಹಿಡಿದು ನಡೆಸುತ್ತಿದ್ದಾರೆ ಎಂದೇ ಕಾಣುತ್ತದೆ.

ಆದರೆ ವಾಸ್ತವವೇ ಬೇರೆ, ಇಲ್ಲಿ ಗುರುವು ಶಿಷ್ಯನ ಕೈಹಿಡಿದು ನಡೆಸುವುದಿಲ್ಲ, ಶಿಷ್ಯನೇ ಗುರುವನ್ನು ನಡೆಸುತ್ತಾನೆ. ಶಿಷ್ಯನ ತೋಳಹಿಡಿದು ಆತ ನಡೆದ ದಾರಿಯಲ್ಲಿ ಗುರು ಹೆಜ್ಜೆ ಹಾಕುತ್ತಿರುತ್ತಾರೆ. ಏಕೆಂದರೆ ಗುರುವಿಗೆ ಶೇ 100ರಷ್ಟು ಅಂಧತ್ವ ಇದೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ಬಿರುಸಿನ ಹೆಜ್ಜೆ ಹಾಕುವಾಗ ಅವರು ಅಂಧ ಎಂಬುದು ತಿಳಿಯುವುದೇ ಇಲ್ಲ. ಎಲ್ಲವೂ ಚೆನ್ನಾಗಿರುವ ವಿಹಾರಿಗಳಿಗಿಂತಲೂ ಬಿರುಸಾಗಿ ನಡೆಯುವ ಈ ಜೋಡಿ ನೋಡುಗರ ಗಮನ ಸೆಳೆಯುತ್ತದೆ.

ಸಂಪೂರ್ಣ ಅಂಧರಾಗಿರುವ ‘ಪ್ರೇರಣ ವಿಶೇಷ ಚೇತನರ ಟ್ರಸ್ಟ್‌’ನ ಟ್ರಸ್ಟಿ ರವಿಕುಮಾರ್‌ ಅವರು ಕಳೆದ 29 ವರ್ಷಗಳಿಂದ ನೂರಾರು ಅಂಗವಿಕಲ ಮಕ್ಕಳಿಗೆ ಆಸರೆಯಾಗಿದೆ. ಕಳೆದ 10 ವರ್ಷಗಳಿಂದ ಸಂಸ್ಥೆಯ ವಿದ್ಯಾರ್ಥಿಯಾಗಿರುವ, 9ನೇ ತರಗತಿ ವಿದ್ಯಾರ್ಥಿ ಹರ್ಷವರ್ಧನನಿಗೆ ರವಿಕುಮಾರ್‌ ಗುರು. ಉತ್ಸಾಹದ ಚಿಲುಮೆಯಾಗಿರುವ ಹರ್ಷವರ್ಧನ ಪ್ರತಿನಿತ್ಯ ಗುರು ರವಿಕುಮಾರ್‌ ಅವರನ್ನು ಕೈಹಿಡಿದು ನಡೆಸುತ್ತಾನೆ.

ADVERTISEMENT

ರವಿಕುಮಾರ್‌– ಹರ್ಷವರ್ಧನ ಜೋಡಿ ಪಿಟಿಟಿ ಕ್ರೀಡಾ ಸಮುಚ್ಚಯದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ತದೇಕಚಿತ್ತದಿಂದ ನಡೆಯುವ ಇವರು ಎಲ್ಲರಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಾರೆ, ಸ್ಫೂರ್ತಿ ತುಂಬುತ್ತಾರೆ. ಕ್ರೀಡಾ ಸಂಕೀರ್ಣಕ್ಕೆ ಇವರಷ್ಟೇ ಬರುವುದಿಲ್ಲ, ಮಕ್ಕಳ ಒಂದು ತಂಡವೇ ಬರುತ್ತದೆ. ಬೌದ್ಧಿಕ ನ್ಯೂನತೆ ಇರುವ ಉಲ್ಲಾಸ್‌ ಈಜುಪಟುವಾಗಿದ್ದು ನಿತ್ಯ ಪಿಇಟಿ ಈಜುಕೊಳದಲ್ಲಿ ಅಭ್ಯಾಸ ಮಾಡುತ್ತಾನೆ.

ಡಯಾಬಿಟಿಕ್‌ ಸಮಸ್ಯೆ ಇರುವ ನಂದಿನಿ ಕೂಡ ರವಿ ಕುಮಾರ್‌ ಅವರನ್ನು ಕೈಹಿಡಿದು ನಡೆಸುತ್ತಾರೆ. ರವಿಕುಮಾರ್‌ ಅವರ ಪತ್ನಿ ಚೈತ್ರಾ ಈ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಟ್ರಸ್ಟ್‌ನ ಆಡಳಿತಾಧಿಕಾರಿ ಡಿ.ಸಿ.ಆನಂದ್‌ ಮಕ್ಕಳನ್ನು ಮಾರುತಿ ವ್ಯಾನ್‌ನಲ್ಲಿ ಕೂರಿಸಿಕೊಂಡು ಬರುತ್ತಾರೆ.

‘ಡಯಾಬಿಟಿಕ್‌ ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ಹೆಚ್ಚು ನಡಿಗೆಯ ಅವಶ್ಯಕತೆ ಇರುತ್ತದೆ. ನಮ್ಮ ಸಂಸ್ಥೆಯಲ್ಲಿ ಮಕ್ಕಳ ಆರೋಗ್ಯಕ್ಕೆ ಪ್ರಮುಖ ಆದ್ಯತೆ ನೀಡಿದ್ದೇವೆ. ಶಾಲಾ ಶಿಕ್ಷಣದ ಜೊತೆಗೆ ಕ್ರೀಡಾ, ಸಂಗೀತ ಕ್ಷೇತ್ರದಲ್ಲೂ ನಮ್ಮ ಮಕ್ಕಳು ತೊಡಗಿಸಿಕೊಂಡಿದ್ದಾರೆ’ ಎಂದು ರವಿಕುಮಾರ್‌ ತಿಳಿಸಿದರು.

ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪ್ರೇರಣಾ ಟ್ರಸ್ಟ್‌ 80 ಅಂಗ ವೈಕಲ್ಯ ಹೊಂದಿರುವ ಮಕ್ಕಳಿಗೆ ಆಶ್ರಯ, ಶಿಕ್ಷಣ ಒದಗಿಸುತ್ತಿದೆ. ಸಂಪೂರ್ಣ, ಭಾಗಶಃ ಅಂಧತ್ವ, ಬೌದ್ಧಿಕ ನ್ಯೂನತೆ, ಸೆಲಬ್ರಲ್‌ ಪಾಲ್ಸಿ (ಮಿದುಳು ವಾತ), ಇನ್ಸೂಲಿನ್‌ ಮೇಲೆ ಅವಲಂಬಿತವಾಗಿರುವ ಮಧುಮೇಹಪೀಡಿತ ಮಕ್ಕಳು ಇಲ್ಲಿ ಹೊಸ ಬದುಕು ಕಂಡಿದ್ದಾರೆ.

ಹ್ಯಾಂಡ್‌ ಬಾಲ್‌ ರಾಷ್ಟ್ರ ತಂಡಕ್ಕೆ ಆಯ್ಕೆ

ನಂಜನಗೂಡು ತಾಲ್ಲೂಕು ನಿಲುಸೋಗೆ ಗ್ರಾಮದ ಹರ್ಷವರ್ಧನ ಹ್ಯಾಂಡ್‌ಬಾಲ್‌ನಲ್ಲಿ ಸಾಧನೆ ಮಾಡಿದ್ದಾನೆ. ಹಲವು ರಾಜ್ಯಗಳಲ್ಲಿ ನಡೆದ ರಾಜ್ಯಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾನೆ. ಸದ್ಯ ಹ್ಯಾಂಡ್‌ಬಾಲ್‌ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿರುವ ಈತ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾನೆ. ಮೈಷುಗರ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಈ ಪ್ರತಿಭೆ ಶಾಲಾ ಚಟುವಟಿಕೆಗಳಲ್ಲೂ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.