ADVERTISEMENT

ಒಳಮೀಸಲಾತಿ: ದತ್ತಾಂಶ ಸಮೀಕ್ಷೆ ಮೇ 5ರಿಂದ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 13:33 IST
Last Updated 23 ಏಪ್ರಿಲ್ 2025, 13:33 IST
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು   

ಮಂಡ್ಯ: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆಯು ಜಿಲ್ಲೆಯಲ್ಲಿ ಮೇ 5ರಿಂದ 17ರವರೆಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಅಧಿಕಾರಿಗಳು ಸಮೀಕ್ಷೆ ನಡಯುವ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕುಟುಂಬದ ಉಪಜಾತಿ, ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸೇರಿದಂತೆ ಸಮೀಕ್ಷೆಯಲ್ಲಿ ನೀಡಲಾಗಿರುವ ಎಲ್ಲಾ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆದು ಅಪಲೋಡ್ ಮಾಡಬೇಕಿರುತ್ತದೆ. ಇದಕ್ಕಾಗಿ ಏಪ್ರಿಲ್ 28ರಂದು ತಾಲ್ಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸುವ ಎನ್ಮುರೇಟರ್ಸ್ ತರಬೇತಿ ನೀಡಲಾಗುವುದು ಎಂದರು.

ADVERTISEMENT

ಎನ್ಮುರೇಟರ್ಸಗಳನ್ನು ಕಡ್ಡಾಯವಾಗಿ ಶಾಲಾ ಶಿಕ್ಷಕರನ್ನು ನೇಮಿಸಬೇಕು. ಪ್ರತಿ ಎನ್ಮುರೇಟರ್ಸ್ ಗುಂಪಿನ ಕೆಲಸವನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರನ್ನು ನೇಮಕ ಮಾಡಬೇಕು. ಮೇ 17ರ ಸಮೀಕ್ಷೆ ಮುಗಿದ ನಂತರ ಮೇ 19ರಿಂದ 22ರವರೆಗೆ ಸ್ಥಳ ನಿಗದಿ ಮಾಡಿ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಸಮೀಕ್ಷೆಯಿಂದ ಬಿಟ್ಟುಹೋಗಿದ್ದಲ್ಲಿ ಸಂಪರ್ಕಿಸಿ ಸಮೀಕ್ಷೆಗೆ ಒಳಗಾಗಲೂ ಅವಕಾಶ ಸಹ ನೀಡಲಾಗಿದೆ ಎಂದರು.

ಏಪ್ರಿಲ್ 25ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ 28ರಂದು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಂಪ್ಯೂಟರ್ ಹಾಗೂ ಸಮೀಕ್ಷೆಯ ಜ್ಞಾನವಿರುವ ಸಿಬ್ಬಂದಿಗಳನ್ನು ನಿಯೋಜಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.