ಪಾಂಡವಪುರ: ‘ಮೀಸಲಾತಿ ಪಡೆಯುತ್ತಿರುವವರೇ ಅದರ ವಿರುದ್ಧ ಮಾತನಾಡುತ್ತಿರುವುದು ಬೇಸರದ ಸಂಗತಿ’ ಎಂದು ಚಿಂತಕ ಮಹೇಶ್ ಮುದ್ದೇನಹಟ್ಟಿ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರಿಶಿಷ್ಟರು, ಕುರುಬರು, ವಿಶ್ವಕರ್ಮರು, ಗಾಣಿಗರು, ಮಡಿವಾಳರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಪಡೆಯುತ್ತಿವೆ. ಶೇ 3ರಿಂದ 5ರಷ್ಟಿರುವ ಬ್ರಾಹ್ಮಣರು ಹಾಗೂ ಜೈನರೂ ಶೇ10ರಷ್ಟು ಮೀಸಲಾತಿಯನ್ನು ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಸಮಾಜದ ಎಲ್ಲ ಜನವರ್ಗಗಳು ಕೂಡ ಮೀಸಲಾತಿಯನ್ನು ಪಡೆಯುತ್ತಿದ್ದರೂ ಪರಿಶಿಷ್ಟರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ದುರಂತದ ಸಂಗತಿ’ ಎಂದರು.
‘ಮೈಸೂರಿನ ಒಡೆಯರ್ ಅವರ ಆಸ್ಥಾನದಲ್ಲಿ ತಮಿಳುನಾಡಿನ ಬ್ರಾಹ್ಮಣರು ದಿವಾನರಾಗಿದ್ದ ವೇಳೆ ಮೈಸೂರು ರಾಜ್ಯದ ಬ್ರಾಹ್ಮಣರು ತಮಗೆ ದಿವಾನ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದರಿಂದಾಗಿಯೇ ವಿಶ್ವೇಶ್ವರಯ್ಯನವರು ದಿವಾನರಾಗಿ ಅಧಿಕಾರ ಅನುಭವಿಸುವಂತಾಯಿತು. ಮೀಸಲಾತಿಗಾಗಿ ಮೊದಲು ಹೋರಾಟ ನಡೆಸಿದವರೇ ಬ್ರಾಹ್ಮಣರು’ ಎಂದು ವಿವರಿಸಿದರು.
ತಹಶೀಲ್ದಾರ್ ಎಸ್.ಸಂತೋಷ್ ಮಾತನಾಡಿ, ‘ಪ್ರತಿಯೊಬ್ಬ ಭಾರತೀಯನೂ ತನ್ನ ಹಕ್ಕಿಗಾಗಿ ಹೋರಾಟ ಮಾಡುವಾಗಲೆಲ್ಲಾ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿ ಪ್ರತಿ ಪ್ರಜೆಗೂ ಸಮಾನ ಅವಕಾಶಗಳನ್ನು ದೊರಕಿಸಿಕೊಟ್ಟಿದ್ದಾರೆ’ ಎಂದರು.
ವಿದ್ಯಾರ್ಥಿನಿ ಮಧುಶ್ರೀ ಅವರಿಂದ ಅಂಬೇಡ್ಕರ್ ಕುರಿತ ಮಹಾನಾಯಕ ಗೀತೆಗೆ ನೃತ್ಯ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ತಾಲ್ಲೂಕು ಪಂಚಾಯಿತಿ ಇಒ ಲೋಕೇಶ್ ಮೂರ್ತಿ, ಎಸಿ ಕಚೇರಿಯ ಗ್ರೇಡ್–2 ತಹಶೀಲ್ದಾರ್ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ಅಧಿಕಾರಿಗಳಾದ ಕೋಮಲಾ, ಟಿ.ಲೋಕೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕೆಂಪೇಗೌಡ, ದಲಿತ ಮುಖಂಡರಾದ ಅರಳಕುಪ್ಪೆ ದೇವರಾಜು, ಸಿದ್ದಲಿಂಗಯ್ಯ, ಅಲ್ಪಹಳ್ಳಿ ಗೋವಿಂದಯ್ಯ ಇದ್ದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಅಂಬೇಡ್ಕರ್ ಮೆಮೋರಿಯಲ್ ಎಜುಕೇಷನ್ ಅಸೋಸಿಯೇಷನ್ ವತಿಯಿಂದ ಅಧ್ಯಕ್ಷ ಜೆ.ಅಂದಾನಯ್ಯ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್‌ಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.