ADVERTISEMENT

ಮಂಡ್ಯದ ಜೆಡಿಎಸ್‌ ಶಾಸಕರಿಗೆ ಮುಖಭಂಗ: ಕ್ಷೇತ್ರ ಕೈ ಪಾಲು

ಕಾಂಗ್ರೆಸ್‌ ಮುಖಂಡರ ಸಂಘಟಿತ ಹೋರಾಟಕ್ಕೆ ಸಿಕ್ಕ ಫಲ, ಮತ್ತೆ ಮಂಡ್ಯಕ್ಕೆ ಒಲಿದ ಸ್ಥಾನ

ಎಂ.ಎನ್.ಯೋಗೇಶ್‌
Published 16 ಜೂನ್ 2022, 19:30 IST
Last Updated 16 ಜೂನ್ 2022, 19:30 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮಂಡ್ಯ: ಕೆ.ಆರ್‌.ಪೇಟೆ ಹೊರತುಪಡಿಸಿ ಉಳಿದ ಆರೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ, ಬಹುತೇಕ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಆಡಳಿತವಿದೆ, ಜಿಲ್ಲೆ ಜೆಡಿಎಸ್‌ ಭದ್ರಕೋಟೆ ಎಂದೇ ಪ್ರಸಿದ್ಧಿ ಪಡೆದಿದೆ. ಆದರೂ ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಗೆ ಸೇರಿದ ಜೆಡಿಎಸ್‌ ಅಭ್ಯರ್ಥಿ ಸೋಲು ಕಂಡಿದ್ದು ಜೆಡಿಎಸ್‌ ನಾಯಕರಿಗೆ ಮುಖಭಂಗವಾಗಿದೆ.

ಜೆಡಿಎಸ್‌ ಕಾರ್ಯಕರ್ತರಲ್ಲದ ಎಚ್‌.ಕೆ.ರಾಮು ಅವರಿಗೆ ಟಿಕೆಟ್‌ ಕೊಟ್ಟಾಗಲೇ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಸದೃಢವಾಗಿರುವ ವಿಶ್ವಾಸ, ಹೆಚ್ಚು ಶಾಸಕರಿರುವ ಭರವಸೆ ಮೇಲೆ ರಾಮು ಅವರನ್ನು ಕಣಕ್ಕಿಳಿಸಲಾಯಿತು. ಸ್ಪರ್ಧೆಯಿಂದ ಹಿಂದೆ ಸರಿದ ಕೆ.ಟಿ.ಶ್ರೀಕಂಠೇಗೌಡರ ಒತ್ತಾಸೆಯೂ ರಾಮು ಅವರನ್ನು ಕಣಕ್ಕಿಳಿಸಲು ಮತ್ತೊಂದು ಕಾರಣವಾಗಿತ್ತು.
ಆದರೆ ಚುನಾವಣೆ ಘೋಷಣೆಯಾದ ನಂತರ ಬಹುತೇಕ ಶಾಸಕರು ‌ಅವರವರ ಕ್ಷೇತ್ರಕ್ಕಷ್ಟೇ ಸೀಮಿತವಾದರು.

ತಮ್ಮ ಜಿಲ್ಲೆಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು, ನಾಲ್ಕು ಜಿಲ್ಲೆಗಳ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯ ಪ್ರಾತಿನಿಧ್ಯ ಉಳಿಸಿಕೊಳ್ಳಬೇಕೆಂಬ ಛಾತಿ ಯಾರಲ್ಲೂ ಮೂಡಲಿಲ್ಲ. ಇದೇ ಧೋರಣೆಯಿಂದ ಕಳೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲೂ ಕ್ಷೇತ್ರ ಕಳೆದುಕೊಳ್ಳಬೇಕಾಯಿತು.

ADVERTISEMENT

ಅತಿಯಾದ ಆತ್ಮವಿಶ್ವಾಸದಿಂದ ಜೆಡಿಎಸ್‌ ವರಿಷ್ಠರು ಕೂಡ ನಿರ್ಲಕ್ಷ್ಯ ತೋರಿದ ಪರಿಣಾಮ ಕ್ಷೇತ್ರ ಕಳೆದುಕೊಳ್ಳಬೇಕಾಯಿತು, 3ನೇ ಸ್ಥಾನಕ್ಕೆ ಕುಸಿತ ಕಾಣಬೇಕಾಯಿತು. ಶ್ರೀಕಂಠೇಗೌಡರೊಬ್ಬರನ್ನು ಬಿಟ್ಟರೆ ಮತ್ತಾವ ಶಾಸಕ ಕೂಡ ಚುನಾವಣೆ ಗೆಲುವಿಗಾಗಿ ಹೋರಾಟ ಮಾಡಲಿಲ್ಲ, ಅಭ್ಯರ್ಥಿಯ ಜೊತೆ ನಿಲ್ಲಲಿಲ್ಲ ಎಂದು ಜನರೇ ಹೇಳುತ್ತಾರೆ. ಚುನಾವಣೆ ಸಮಯದಲ್ಲಿ ಎಂಎಲ್‌ಸಿ ಮರಿತಿಬ್ಬೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಾಗದ ಸ್ಥಿತಿಯೂ ಪಕ್ಷಕ್ಕೆ ನಷ್ಟ ಉಂಟಾಯಿತು.

ಕಾಂಗ್ರೆಸ್‌ ಒಗ್ಗಟ್ಟು: ಇದೇ ಮೊದಲ ಬಾರಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಇತಿಹಾಸ ಸೃಷ್ಟಿಸಿದೆ. ಮತ್ತೆ ಮಂಡ್ಯ ಮೂಲದವರೇ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಪಕ್ಷವಷ್ಟೇ ಬದಲಾಗಿದ್ದು ಪ್ರಾತಿನಿಧ್ಯ ಮತ್ತೆ ಮಂಡ್ಯಕ್ಕೆ ಸಿಕ್ಕಿದೆ.

ಮಧು ಜಿ ಮಾದೇಗೌಡ ಅವರು ಬಿಜೆಪಿ ಸರ್ಕಾರದಲ್ಲಿ ಒಂದೂವರೆ ವರ್ಷ ಕಾಲ ಬಿಜೆಪಿ ನಾಮ ನಿರ್ದೇಶಿತ ಸದಸ್ಯರಾಗಿ ವಿಧಾನ ಪರಿಷತ್‌ ಪ್ರವೇಶಿಸಿದ್ದರು. ಈಗ ಅವರು ದಕ್ಷಿಣ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿ 2ನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ ಮುಖಂಡರೆಲ್ಲರೂ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಸಂಘಟಿತವಾಗಿ ಹೋರಾಟ ನೀಡಿದ ಪರಿಣಾಮವಾಗಿ ವಿಜಯಮಾಲೆ ಒಲಿದು ಬಂತು. ಮಧು ಮಾದೇಗೌಡ ಅವರು ವರ್ಷದಿಂದಲೂ ಪ್ರಚಾರದಲ್ಲಿ ತೊಡಗಿದ್ದರು. ಅತೀ ಬೇಗ ಟಿಕೆಟ್‌ ಗಟ್ಟಿಯಾದ ಕಾರಣ ಕ್ಷೇತ್ರದಾದ್ಯಂತ ಸಂಚಾರ ಮಾಡಲು ಸಾಧ್ಯವಾಯಿತು.

ಜಿಲ್ಲೆಯಿಂದ ಹೆಚ್ಚು ಮತ ಕೊಡಿಸಲು ಜಿಲ್ಲೆಯ ಬಿಜೆಪಿ ಮುಖಂಡರು ಸತತ ಪ್ರಯತ್ನಿಸಿದ್ದರು, ಅದರಲ್ಲಿ ಜೆಡಿಎಸ್‌ನ ಮತ ಕೀಳಲು ಅವರು ಯಶಸ್ವಿಯೂ ಆದರು. ಅದು ಕಾಂಗ್ರೆಸ್‌ ಗೆಲುವಿನ ಅಂತಹ ಹೆಚ್ಚಾಗಲು ಪರೋಪಕ್ಷವಾಗಿ ಕಾರಣವಾಯಿತು.

*****

ಕಾಂಗ್ರೆಸ್‌ ಮುಖಂಡರ ಉತ್ಸಾಹ ಇಮ್ಮಡಿ

ದಿನೇಶ್‌ ಗೂಳಿಗೌಡ ಗೆಲುವಿನ ನಂತರ ಮಧು ಜಿ ಮಾದೇಗೌಡ ಅವರೂ ಗೆಲುವು ಸಾಧಿಸಿರುವುದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ಗೆಲುವು ಅವರಿಗೆ ಹೊಸ ಹುಮ್ಮಸ್ಸು ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಏಳೂ ಕ್ಷೇತ್ರಗಳಲ್ಲಿ ಸೋತು ಕಂಗೆಟ್ಟಿದ್ದ ಮುಖಂಡರಿಗೆ ಈ ಗೆಲುವು ಸಂಜೀವಿನಿಯಾಗಿದೆ. ಕಾಂಗ್ರೆಸ್‌ ಮುಖಂಡರು ದಿಕ್ಸೂಚಿ ಎಂದೇ ಬಣ್ಣಿಸುತ್ತಾರೆ.

ಮುಂದೆ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ ಸೇರುವ ಉತ್ಸಾಹದಲ್ಲಿದ್ದು ರಾಜಕೀಯ ಧ್ರುವೀಕರಣಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ ಎಂದು ಮುಖಂಡರು ಹೇಳುತ್ತಾರೆ.

****

ಕಾಂಗ್ರೆಸ್‌ ಕಾರ್ಯಕರ್ತರ ಸಂಘಟಿತ ಹೋರಾಟದಿಂದ ಮಧು ಜಿ ಮಾದೇಗೌಡರು ದಾಖಲೆ ಸೃಷ್ಟಿಸಿದ್ದಾರೆ. ರಾಜ್ಯ ನಾಯಕರ ಸಹಕಾರದಿಂದ ಸ್ಥಳೀಯ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು

‍–ಎನ್‌.ಚಲುವರಾಯಸ್ವಾಮಿ, ಕಾಂಗ್ರೆಸ್‌ ಮುಖಂಡ

***

ನಾವು ಸೋಲು ಕಂಡಿದ್ದರೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ವರ್ಚಸ್ಸು ಹೆಚ್ಚಿರುವುದು ಮತಗಳಿಕೆಯಲ್ಲಿ ಸಾಬೀತಾಗಿದೆ. ಸೋಲಿನಿಂದ ಹತಾಶರಾಗಿಲ್ಲ, ಇದೊಂದು ಪಾಠದಂತೆ ತಿಳಿದು ಮುಂದಿನ ಚುನಾವಣೆ ವೇಳೆಗೆ ಸದೃಢರಾಗುತ್ತೇವೆ
–ಸಿ.ಪಿ.ಉಮೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.