ನಾಗಮಂಗಲ: ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಪತ್ರಕರ್ತ ಸಮಾಜದ ಕನ್ನಡಿಯಂತೆ. ಪತ್ರಕರ್ತನೆಂಬ ಕನ್ನಡಿಯ ಮೇಲೆ ಯಾವುದೇ ಆಮಿಷಗಳೆಂಬ ದೂಳು ಮೆತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಿದರೆ ಮಾತ್ರವೇ ಸತ್ಯ ದರ್ಶನ ಮಾಡಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿಕ್ಷಕರ ಭವನದ ಆವರಣದಲ್ಲಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಸಮಾಜದಲ್ಲಿ ನಡೆಯುವ ವಿದ್ಯಮಾನವನ್ನು ಇದ್ದಹಾಗೆ ತೋರಿಸಿದಾಗ ಮಾತ್ರವೇ ಸಮಾಜವನ್ನು ತಿದ್ದಲು ಸಾಧ್ಯ. ಎಲ್ಲೋ ಮೂಲೆಯಲ್ಲಿರುವ ವ್ಯಕ್ತಿಗಳಿಗೂ ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ತಿಳಿಸುವ ಕೆಲಸವನ್ನು ಮಾಡುವ ಪತ್ರಿಕಾ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದೆ. ದೇವಾಲಯದ ಗಂಟೆಯಷ್ಟೇ ಪತ್ರಕರ್ತರು ಬಳಸುವ ಪೆನ್ನು ಮತ್ತು ಕ್ಯಾಮೆರಾಗಳು ಪವಿತ್ರವಾಗಿವೆ. ಅವುಗಳನ್ನು ಸತ್ಯ ತಿಳಿಸಲು ಬಳಸಿದರೆ ಅದರ ಪಾವಿತ್ರ್ಯತೆ ಉಳಿಯುತ್ತದೆ. ಒಬ್ಬ ಪ್ರಾಮಾಣಿಕ ಪತ್ರಕರ್ತ ಮಾಡಿದ ಸುದ್ದಿಯನ್ನು ಜಗತ್ತು ಗುರುತಿಸುತ್ತದೆ ಎಂದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ಹಿಂದೆ ರಾಜಕಾರಣಿಗಳು ಪತ್ರಿಕೆಗಳ ಸುದ್ದಿಗಳನ್ನು ಓದಿ ಸದನಗಳಿಗೆ ಹೋಗುತ್ತಿದ್ದರು. ಆದರೆ, ಇಂದು ಸುದ್ದಿ ಬಂದರೂ ಲೆಕ್ಕಿಸದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಕಾರ್ಯ ಕ್ಷೇತ್ರದಲ್ಲಿ ತಪ್ಪು ಹೆಜ್ಜೆಯಿಟ್ಟಾಗ ತಿದ್ದಿ ಹೇಳುವ ಶಕ್ತಿ ಪತ್ರಕರ್ತರಿಗಿದೆ’ ಎಂದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಆರೋಗ್ಯಕರ ಸಮಾಜವನ್ನು ಸೃಷ್ಟಿಸುವ ಕೆಲಸ ಮಾಡಬೇಕು. ಇಂದು ಮಾಧ್ಯಮಗಳಲ್ಲಿ ಅನಾರೋಗ್ಯಕರ ಪೈಪೋಟಿ ಕಾಣುತ್ತಿದ್ದೇವೆ. ಎಷ್ಟೋ ಸಮಯದಲ್ಲಿ ಸುಳ್ಳನ್ನು ಸತ್ಯ ಎಂದು ಬಿಂಬಿಸುವ ಕೆಲಸವೂ ನಡೆಯುತ್ತವೆ. ಮಾಧ್ಯಮಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ’ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಡೇರಪುರ ಶಾಲೆಯ ಮುಖ್ಯ ಶಿಕ್ಷಕ ಮುರುಳೀಧರ ಮಾತನಾಡಿ, ‘ಸರ್ಕಾರಿ ಶಾಲೆಗಳು ಪ್ರಸ್ತುತದ ದಿನಗಳಲ್ಲಿ ಮುಚ್ಚುವ ಭೀತಿ ಎದುರಿಸುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು.
ವೈದ್ಯಕೀಯ ಕ್ಷೇತ್ರದಿಂದ ಡಾ.ಶರತ್ ಕುಮಾರ್, ಮಾಧ್ಯಮ ಕ್ಷೇತ್ರದಿಂದ ಎ.ಹೆಚ್. ಬಾಲಕೃಷ್ಣ, ಶಿಕ್ಷಣ ಕ್ಷೇತ್ರದಿಂದ ಮುರುಳೀಧರ, ಪತ್ರಿಕಾ ವಿತರಕ ರಾಮಣ್ಣ, ಕೃಷಿ ಕ್ಷೇತ್ರದಿಂದ ವಿರೂಪಾಕ್ಷ ಮೂರ್ತಿ, ಪೌರ ಕಾರ್ಮಿಕರಾದ ಪಾರ್ವತಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಆದರ್ಶ್, ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನವೀನ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸೀತಾರಾಮು, ರಾಜ್ಯ ಸಮಿತಿ ನಿರ್ದೇಶಕ ಸಿ.ಎನ್.ಮಂಜುನಾಥ್, ರಾಜ್ಯ ಕಾರ್ಯದರ್ಶಿ ಕೆರಗೋಡು ಸೋಮಶೇಖರ್, ಕೆ.ಸಿ.ಮಂಜುನಾಥ್ ಸೇರಿದಂತೆ ಪತ್ರಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.