ಮಳವಳ್ಳಿ: ‘ಈ ಬಾರಿ ಮತದಾನಕ್ಕೆ ಕೆಲ ದಿನಗಳು ಇದ್ದಾಗ ನಾನು ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಯ ಜೊತೆ ಒಳಒಪ್ಪಂದ ಮಾಡಿಕೊಂಡಿಲ್ಲ’ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿದರು.
ಪಟ್ಟಣದ ಹೊರವಲಯದ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ 25 ಸಾವಿರ ಮತದಾರರು ನಮಗೆ ಮತ ನೀಡಿದ್ದು, ಎಲ್ಲರ ಪಾದಗಳಿಗೂ ನಮಸ್ಕರಿಸುವೆ, ಅದಕ್ಕಾಗಿ ದುಡಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ. ಮುಂದಿನ ಐದು ವರ್ಷಗಳಲ್ಲಿ ನಿರಂತರವಾಗಿ ಪಕ್ಷವನ್ನು ಸಂಘಟಿಸಿ 2028ರ ಚುನಾವಣೆಯಲ್ಲಿ 2.50 ಲಕ್ಷ ಮತದಾರರ ವಿಶ್ವಾಸ ಗಳಿಸುವೆ. ಚುನಾವಣೆಯಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ, ಅಪವಾದ ಹೊರಿಸಿದ್ದರು. ನಾನು ಯಾವುದೇ ಒಳಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಲಕ್ಷ್ಮಿನರಸಿಂಹಸ್ವಾಮಿ ದೇವರ ಸನ್ನಿದಿಯಲ್ಲಿ ಹೇಳುತ್ತಿರುವೆ, ನಾನು ಅವರಿಗೆ, ಇವರಿಗೆ ಬುಕ್ ಆಗಿದ್ದೆ ಎನ್ನುವ ಮಾತು ಕೇಳಿ ಬಂದಿದ್ದವು, ನಾನೇದಾದರೂ ಆ ಕೆಲಸ ಮಾಡಿದರೆ ದೇವರು ನಮ್ಮ ಸಂಸಾರವನ್ನು ಸರ್ವನಾಶ ಮಾಡಲಿ, ಇಲ್ಲದಿದ್ದರೆ ಸುಮ್ಮನೆ ಅಪಪ್ರಚಾರ ಮಾಡಿದವರಿಗೆ ಶಿಕ್ಷೆ ನೀಡಲಿ ಎಂದು ಹೇಳಿದರು.
ನಾನು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ನೀವು ಮುಂಚಿತವಾಗಿ ಬರಬೇಕಿತ್ತು ಎನ್ನುವ ಭಾವನೆ ಜನರಲ್ಲಿ ಇತ್ತು. ಕ್ಷೇತ್ರಕ್ಕೆ ಬಂದಾಗಿನಿಂದಲೂ ನನ್ನ ವಿರೋಧಿಗಳು ಸೈಟ್ ಹಗರಣ ಆರೋಪ, ನಕಲಿ ಆಡಿಯೊ ಬಿಡುಗಡೆ ಇತ್ಯಾದಿ ಮಾಡಿದರು. ಅವರಿಗೆ ಜನರೇ ಉತ್ತರ ನೀಡಲಿದ್ದಾರೆ. ಸದ್ಯದಲ್ಲೇ ಕಾರ್ಯಕರ್ತರ ಸಭೆ ನಡೆಸಿ ಲೋಪದೋಷ ಬಗ್ಗೆ ಚರ್ಚೆಸಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷ ಸಂಘಟನೆ ಮಾಡಲು ಒತ್ತು ನೀಡಲಾಗುವುದು ಎಂದರು ಹೇಳಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ಕಾಂಗ್ರೆಸ್ ನೀಡಿರುವ ಭರವಸೆಗಳಿಗೆ ಮನಸೋತ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಧೃತಿಗೆಡದೆ, ಪಕ್ಷವನ್ನು ಸದೃಢಗೊಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ಶಕುಂತಲಾ ಮಲ್ಲಿಕ್, ಪುರಸಭೆ ಸದಸ್ಯರಾದ ಪುಟ್ಟಸ್ವಾಮಿ, ರವಿ, ಮುಖಂಡರಾದ ಎಂ.ಪಿ.ಗೌಡ, ಮಹದೇವಸ್ವಾಮಿ, ನಾಗಣ್ಣ, ಸಿದ್ದಲಿಂಗಸ್ವಾಮಿ, ಆಟೋ ಮಂಜಣ್ಣ, ಕ್ಯಾತನಹಳ್ಳಿ ಅಶೋಕ್, ಕೆ.ಸಿ.ನಾಗೇಗೌಡ, ನಾಗೇಶ್, ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.