ಮಂಡ್ಯ: ‘ಕನ್ನಂಬಾಡಿ ಕಟ್ಟೆ ಉಳಿಸಬೇಕೆಂದು ಪ್ರತಿಭಟನೆ ಮಾಡುತ್ತಿರುವುದೇ ದುರಂತ, ಏಕೆಂದರೆ ಕಾಂಗ್ರೆಸ್ ಮತಿಹೀನ ಸರ್ಕಾರವಾಗಿದ್ದು, ದೈವತ್ವ ಸ್ವರೂಪವಾದ ಅಣೆಕಟ್ಟೆಗೆ ಧಕ್ಕೆ ತರುವ ಯೋಜನೆ ಮಾಡಲು ಹೊರಟವರಿಗೆ ದೇವರೇ ಶಿಕ್ಷೆ ಕೊಡುತ್ತಾನೆ’ ಎಂದು ಹೈಕೋರ್ಟ್ ಹಿರಿಯ ವಕೀಲ ಎಂ.ಶಿವಪ್ರಕಾಶ ಹರಿಯಾಯ್ದರು.
ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ರೈತ ಸಂಘಟನೆಗಳು, ದಲಿತ, ಕಾರ್ಮಿಕ, ಕನ್ನಡಪರ, ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ನಡೆದ ‘ಕನ್ನಂಬಾಡಿ ಕಟ್ಟೆ ಉಳಿಸಿ’ ಎಂಬ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಣೆಕಟ್ಟೆ ನಿರ್ಮಿಸಿ ಜನೋಪಯೋಗಿ ಯೋಜನೆ ತಂದರು. ಆದರೆ, ಈ ಸರ್ಕಾರ ಅಪಾಯಕಾರಿ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ. ಇತಿಹಾಸ ಅರಿಯದವರು, ಇತಿಹಾಸ ಓದದವರು ಮೋಜು ಮಸ್ತಿ ಮಾಡಲು ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಲು ಮುಂದಾಗುತ್ತಾರೆ, ಯಾರೂ ಕೇಳದಿದ್ದರೂ ಆರತಿ ಮಾಡಬೇಕೆಂದು ನಿಂತಿದ್ದಾರೆ. ಇದೆಲ್ಲ ಹಣ ಮಾಡಲಿಕ್ಕೆ, ಖಾಸಗಿ ಲಾಬಿಯವರಿಗೆ ಅನುಕೂಲ ಮಾಡಿಕೊಡಲು ಬಾರ್ ಅಂಡ್ ರೆಸ್ಟೋರೆಂಟ್, ಮೋಜು ಮಸ್ತಿಗೆ ಅವಕಾಶ ಮಾಡಿಕೊಡುವಂತಹ ಯೋಜನೆಗೆ ಕೈ ಹಾಕಿದ್ದಾರೆ’ ಎಂದು ಕಿಡಿಕಾರಿದರು.
ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯ ಘಕಟದ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ‘ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ₹2,662 ಕೋಟಿ ಖರ್ಚು ಮಾಡಿ ಯಾವ ಸಾಧನೆ ಮಾಡಲು ಹೊರಟಿದೆ ಎನ್ನುವುದನ್ನು ತಿಳಿಸಬೇಕು. ಈ ಯೋಜನೆಯಿಂದ ನದಿ ಮಾಲಿನ್ಯ, ಅರಣ್ಯ ನಾಶ, ಪ್ಲಾಸ್ಟಿಕ್ ಬಿಕ್ಕಟ್ಟು, ಅಂತರ್ಜಲ ಕುಸಿತ ಇವುಗಳಿಗೆ ಪರಿಹಾರ ಸಿಗುತ್ತದೆಯೇ ಎನ್ನುವುದನ್ನೂ ಈ ಸರ್ಕಾರವೇ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಮೈಸೂರಿನ ನಿವೃತ್ತ ಹಿರಿಯ ಭೂವಿಜ್ಙಾನಿ ಪ್ರೊ.ಎಚ್.ಬಿ.ಬಸವರಾಜಪ್ಪ ಮಾತನಾಡಿದರು. ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಾತತ್ವ ಶಾಸ್ತ್ರಕಾರ ಡಾ.ಎನ್.ಎಸ್.ರಂಗರಾಜು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಭಾಗವಹಿಸಿದ್ದರು.
ಕಟ್ಟೆಗೆ ಕೇಡು ಮಾಡುವವರಿಗೆ ಒಳಿತಾಗಲ್ಲ
ಸಾಮಾನ್ಯ ಜ್ಞಾನವಿಲ್ಲದ ರಾಜಕಾರಣಿಗಳು ಮೋಜು, ಮಸ್ತಿಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ
‘ಕುಮಾರಸ್ವಾಮಿ ಬಾಯಿ ಬಿಡುತ್ತಿಲ್ಲ’
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ವಿಚಾರದಲ್ಲಿ ಬಾಯಿ ಬಿಡುತ್ತಿಲ್ಲ. ಇದು ಏಕೆ ಎನ್ನುವುದ ತಿಳಿಯುತ್ತಿಲ್ಲ. ಕೆಆರ್‌ಎಸ್ ಭಾಗದ ಆರು ಗ್ರಾಮ ಪಂಚಾಯಿತಿಯವರು ಈ ಯೋಜನೆಯನ್ನೇ ವಿರೋಧಿಸಿದ್ದಾರೆ. ಮೂರು ದಶಕಗಳಿಂದ ಹೋರಾಟದಲ್ಲಿ ತೊಡಗಿರುವ ನಮಗೆ ನಿಂದನೆ ಹಾಗೂ ಅಪಮಾನವೇನೂ ಹೊಸತಲ್ಲ’ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.