ADVERTISEMENT

ಕೆ.ಆರ್.ಎಸ್ ಹಿನ್ನೀರು: ಮುಖ್ಯರಸ್ತೆಗೆ ಅಪಾಯ

ಗಂಜಿಗೆರೆಯ ಬಳಿ ರಸ್ತೆಗೆ ತಡೆಗೋಡೆ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:43 IST
Last Updated 26 ಜುಲೈ 2024, 14:43 IST
ಕೆ.ಆರ್.ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಗಂಜಿಗೆರೆ  - ಕಟ್ಟಹಳ್ಳಿ ಗೇಟ್ ಸಮೀಪ ಹಿನ್ನೀರು ಮುಖ್ಯರಸ್ತೆಗೆ ಹರಿದು ಬಂದಿದೆ
ಕೆ.ಆರ್.ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಗಂಜಿಗೆರೆ  - ಕಟ್ಟಹಳ್ಳಿ ಗೇಟ್ ಸಮೀಪ ಹಿನ್ನೀರು ಮುಖ್ಯರಸ್ತೆಗೆ ಹರಿದು ಬಂದಿದೆ    

ಕೆ.ಆರ್.ಪೇಟೆ: ಕೆ.ಆರ್.ಎಸ್ ಜಲಾಶಯ ಭರ್ತಿಯಾಗಿರುವುದರಿಂದ ಕಟ್ಟಹಳ್ಳಿ ಗೇಟ್ ಸಮೀಪ ಗಂಜಿಗೆರೆ- ಕೆ.ಆರ್.ಪೇಟೆ- ತ್ರಿವೇಣಿ ಸಂಗಮದ ಮುಖ್ಯರಸ್ತೆಗೆ ಹಿನ್ನೀರು ಹರಿದಿದ್ದು, ಎತ್ತರಿಸಿದ ರಸ್ತೆಗೆ ಕಲ್ಲಿನ ವಾಡವನ್ನು ಅಳವಡಿಸದೇ ಇರುವುದರಿಂದ ರಸ್ತೆ ಕುಸಿಯುವ ಅಪಾಯವಿದೆ.

ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳದ ಸಂದರ್ಭ ಈ ರಸ್ತೆಗೆ ಡಾಂಬರ್ ಹಾಕಲಾಗಿತ್ತು. ಇದು ಕೆ.ಆರ್.ನಗರ, ಕೆ.ಆರ್.ಪೇಟೆ. ಮೈಸೂರು, ಭೂವರಾಹನಾಥಸ್ವಾಮಿ ಮತ್ತು ತ್ರಿವೇಣಿ ಸಂಗಮಕ್ಕೆ ಸಂಚರಿಸುವವರಿಗೆ ಇದೇ ಪ್ರಮುಖ ರಸ್ತೆಯಾಗಿದ್ದು, ಹಿನ್ನೀರಿಗೆ ಎತ್ತರಿಸಿರುವ ರಸ್ತೆಗೆ ಆಧುನಿಕ ತಂತ್ರಜ್ಞಾನದ ಸಿಮೆಂಟ್ ತಡೆಗೋಡೆ ಇಲ್ಲವೇ ಕಲ್ಲಿನ ವಾಡ (ಕಲ್ಲಿನ ತಡೆಗೋಡೆ)ವನ್ನು ನಿರ್ಮಿಸಬೇಕು ಎಂಬುದು ಜನರ ಒತ್ತಾಯ.

ತಡೆಗೋಟೆ ನಿರ್ಮಿಸದಿದ್ದರೆ ನದಿ ನೀರಿನ ರಭಸಕ್ಕೆ ಮಣ್ಣುಕೊರೆದು ರಸ್ತೆ ಕುಸಿಯುತ್ತದೆ. ರಸ್ತೆಯ ಎರಡೂ ಬದಿ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಸಂತೆಯೊಳಗೆ ಮಾರುದ್ದ ಎಣೆದಂತೆ ಕೆಲಸ ಮಾಡಿದ್ದರಿಂದ ಈಗ ರಸ್ತೆಯ ಮಣ್ಣು ಕುಸಿಯುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ADVERTISEMENT

‘ಈ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು, ಜನರು ಸಂಚರಿಸುತ್ತಿದ್ದು, ಆಯತಪ್ಪಿ ರಸ್ತೆಯ ಬದಿಗೆ ವಾಹನ ಹೋದರೆ ನದಿಯ ಹಿನ್ನೀರಿಗೆ ಬೀಳಬೇಕಾಗುತ್ತದೆ. ವಾಹನದೊಂದಿಗೆ ಸವಾರರು ಜಲಸಮಾಧಿಯಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಕ್ರಮ ವಹಿಸಬೇಕು’ ಎಂದು ಗಂಜಿಗೆರೆ ಮಹೇಶ್ ಮತ್ತು ಧರಣೇಶ್ ಒತ್ತಾಯಿಸುತ್ತಾರೆ.

ನಾಮಫಲಕವೇ ಇಲ್ಲ:

‘ಗಂಜಿಗೆರೆ- ಕೆ.ಆರ್.ಪೇಟೆ- ತ್ರಿವೇಣಿ ಸಂಗಮದ ಮುಖ್ಯರಸ್ತೆ ಅಂತರ್ ಜಿಲ್ಲೆ ಸಂಪರ್ಕಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೆ ಎಲ್ಲಿಯೂ ತಿರುವುಗಳ ಬಗ್ಗೆ ಎಚ್ಚರ, ಈ ರಸ್ತೆಯಲ್ಲಿ ಇರುವ ಪುರಾಣ ಪ್ರಸಿದ್ಧ ಭೂವರಾಹನಾಥ ಕಲ್ಲಹಳ್ಳಿ, ತ್ರಿವೇಣಿ ಸಂಗಮ, ಬಸ್ತಿಗೊಮ್ಮಟ ಕ್ಷೇತ್ರದ ಬಗ್ಗೆ ನಾಮಫಲಕ ಅಳವಡಿಸಿಲ್ಲ. ಅಲ್ಲಲ್ಲಿ ರಸ್ತೆ ಮಾರ್ಗಸೂಚಿಗಳನ್ನು ಅಳವಡಿಸದೇ ಇರುವುದರಿಂದ ಈ ಕ್ಷೇತ್ರಗಳಿಗೆ ಬರುವ ದಾರಿಯುದ್ದಕ್ಕೂ ವಾಹನ ನಿಲ್ಲಿಸಿ ಜನರನ್ನು ಕೇಳಿಕೊಂಡು ಬರುವ ಸ್ಥಿತಿ ಎದುರಾಗಿದೆ. ಕಟ್ಟೇರಿ ಸರ್ಕಲ್‌, ಕೆ.ಆರ್.ಪೇಟೆ, ಭೇರ್ಯ- ಕೆ.ಆರ್.ನಗರ ಕಡೆಗಳಿಂದ ಬರುವ ರಸ್ತೆಗೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಬೇಕು’ ಎಂದು ಬಲ್ಲೇನಹಳ್ಳಿ ಶಶಿಧರ್ ಒತ್ತಾಯಿಸಿದರು.

ಜಿಲ್ಲಾ ಹೆದ್ದಾರಿಯಾದರೂ ಮಾರ್ಗಸೂಚಿ ನಾಮಫಲಕಗಳನ್ನು ಸರಿಯಾಗಿ ಅಳವಡಿಸದಿರುವದು
ಗಂಜಿಗೆರೆ- ಕೆ.ಆರ್.ಪೇಟೆ- ತ್ರಿವೇಣಿ ಸಂಗಮದ ಮುಖ್ಯರಸ್ತೆಯ ಸಮಸ್ಯೆ ಇಲಾಖೆಯ ಗಮನಕ್ಕೆ ಬಂದಿದ್ದು ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು
-ಮಂಜುನಾಥ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.