ADVERTISEMENT

ಕೊಡಗಿನಲ್ಲಿ ಧಾರಾಕಾರ ಮಳೆ: ಕೆಆರ್‌ಎಸ್‌ ಹೊರಹರಿವು ಹೆಚ್ಚಳ, ಮೈದುಂಬಿದ ಕಾವೇರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 17:40 IST
Last Updated 16 ಅಕ್ಟೋಬರ್ 2019, 17:40 IST
   

ಬೆಂಗಳೂರು: ಕರಾವಳಿ, ಒಳನಾಡು, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಬುಧವಾರ ಉತ್ತಮ ಮಳೆಯಾಗಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಸಿಡಿಲು ಬಡಿದು ಒಬ್ಬರು ಮೃತಪಟ್ಟಿದ್ದು, ಕಾರವಾರ ಬಳಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಗೆ ಸಿಡಿಲು ಬಡಿದ ನಾಲ್ವರು ಗಾಯಗೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಜಲಾಶಯ ಭರ್ತಿಯಾಗಿರುವ ಕಾರಣ ಹೊರಹರಿವನ್ನು 25,959 ಕ್ಯುಸೆಕ್‌ಗೆ ಹೆಚ್ಚಳ ಮಾಡಲಾಗಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸಂಪೂರ್ಣವಾಗಿ ಭರ್ತಿಯಾಗಿದೆ. ಬುಧವಾರ ಸಂಜೆಯ ವೇಳೆಗೆ 23,105 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಕಾವೇರಿ ನೀರಾವರಿ ನಿಗಮವು ನದಿ ತಟದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ADVERTISEMENT

ಬೆಳೆ ಹಾನಿ: ಕೆ.ಆರ್‌.ಪೇಟೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸಿಂಧುಘಟ್ಟ ಗ್ರಾಮದ ಕೆರೆ ಕೋಡಿ ಒಡೆದು ಜಮೀನಿಗೆ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ, ಬಾಳೆ ಮತ್ತು ಕಬ್ಬಿನ ಬೆಳೆ ನಾಶವಾಗಿದೆ. ಅಗ್ರಹಾರಬಾಚಹಳ್ಳಿ ಗ್ರಾಮದ ಕೆರೆ ಕೋಡಿ ಬಿದ್ದಿದ್ದು, ಸಂಪರ್ಕ ಸೇತುವೆ ಜಲಾವೃತಗೊಂಡಿತ್ತು.

ಮೈಸೂರು ನಗರ ಹಾಗೂ ಸಕಲೇಶಪುರದಲ್ಲಿ ಮಂಗಳವಾರ ರಾತ್ರಿ ಧಾರಾಕಾರವಾಗಿ ಮಳೆಯಾಯಿತು.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಧ್ಯಾಹ್ನ ಒಂದೂವರೆ ಗಂಟೆ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಬಂಟ್ವಾಳ ತಾಲ್ಲೂಕಿನಲ್ಲಿ ಗರಿಷ್ಠ 4 ಸೆಂ.ಮೀ. ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ 2.8 ಸೆಂ.ಮೀ. ಮಳೆ ಸುರಿದಿದೆ. ಕಾಸರಗೋಡು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಪರಿಸರದ ಚೆರ್ಕಾಡಿ, ಪೇತ್ರಿ, ಆರೂರು ಕರ್ಜೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸ, ಕೊಪ್ಪ, ಮೂಡಿಗೆರೆಯಲ್ಲೂ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ನಗರ ಸುತ್ತಮುತ್ತ, ತೀರ್ಥಹಳ್ಳಿ,ಕೋಣಂದೂರು, ಸೊರಬದಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದೆ. ಸಾಗರ, ಶಿಕಾರಿಪುರ, ಹೊಸನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ಚಿಕ್ಕಜಾಜೂರಿನಲ್ಲೂ ಉತ್ತಮ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬುಧವಾರ ಗುಡುಗು ಸಹಿತ ಮಳೆಯಾಗಿದೆ.ಸಿದ್ದಾಪುರ, ಗೋಕರ್ಣ, ಜೊಯಿಡಾ, ಮುಂಡಗೋಡದಲ್ಲಿ ಗಾಳಿ ಸಹಿತ ಮಳೆ ಸುರಿಯಿತು.

ದಕ್ಷಿಣ ಒಳನಾಡು, ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ರಾಜ್ಯಕ್ಕೆ ಈಶಾನ್ಯ ಮುಂಗಾರು ಮಾರುತಗಳು ಪ್ರವೇಶಿಸಿದ್ದು, ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನಲ್ಲಿ ಅ.17 ಮತ್ತು 18ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.‌

ಅ.20ರವರೆಗೆ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.