ADVERTISEMENT

KRS, ಹೇಮಾವತಿ ನಾಲೆ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿ: ಮಧು ಜಿ.ಮಾದೇಗೌಡ

ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಜಿ.ಮಾದೇಗೌಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:01 IST
Last Updated 4 ಡಿಸೆಂಬರ್ 2025, 7:01 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ನೀರು ಬಳಕೆದಾರರ ಸಂಘಗಳ ಪುನಶ್ಚೇತನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉದ್ಘಾಟಿಸಿದರು
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ನೀರು ಬಳಕೆದಾರರ ಸಂಘಗಳ ಪುನಶ್ಚೇತನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉದ್ಘಾಟಿಸಿದರು   

ಮಂಡ್ಯ: ನೀರು ನಿರ್ವಹಣೆಯ ಜವಾಬ್ದಾರಿ ಜೊತೆಗೆ, ಕೆಆರ್‌ಎಸ್ ಮತ್ತು ಹೇಮಾವತಿ ಜಲಾಶಯ ಯೋಜನಾ ಮಟ್ಟದ ಸಹಕಾರ ಸಂಘಗಳ ಚುನಾಯಿತರು, ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ಹೊಣೆಗಾರಿಕೆ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕೆಆರ್‌ಎಸ್ ಮತ್ತು ಹೇಮಾವತಿ ಜಲಾಶಯಗಳ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ವತಿಯಿಂದ ಬುಧವಾರ ನಡೆದ ನೀರು ಬಳಕೆದಾರರ ಸಂಘಗಳ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಕಡೇ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲೆಂದೇ ಸರ್ಕಾರ ಸಂಘಗಳನ್ನು ರಚನೆ ಮಾಡಿ ಕೆಲವು ನಿಯಮಗಳನ್ನು ರೂಪಿಸಿದೆ. ಸಂಘಗಳು ಸರ್ಕಾರದ ಅನುದಾನ ಅವಲಂಬಿಸದೆ ನಿರ್ವಹಣಾ ವೆಚ್ಚವನ್ನು ರೈತರಿಂದಲೇ ಪಡೆದು ನಾಲೆಗಳ ಸ್ವಚ್ಛತೆಯಲ್ಲಿ ಮುಖ್ಯ ಪಾತ್ರ ವಹಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಕೆಆರ್‌ಎಸ್ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷ ಹಳುವಾಡಿ ಕೃಷ್ಣ ಮಾತನಾಡಿ, ನಾಲೆಗಳನ್ನ ದುರಸ್ತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಕೊಂಡು ಹೋಗೋಣ ಎಂದು ಮನವಿ ಮಾಡಿದರು.

ಮಹಾಮಂಡಲದ ಸಲಹಾ ಸಮಿತಿ ಸದಸ್ಯ ನಂಜೇಗೌಡ, ಸಂಘದ ಅಧ್ಯಕ್ಷರಾದ ಆರ್.ಎ.ನಾಗಣ್ಣ, ಮಂಗಲ ಯೋಗೀಶ್, ಮಾಜಿ ಅಧ್ಯಕ್ಷ ಕೆ.ಎಲ್.ದೊಡ್ಡಲಿಂಗೇಗೌಡ, ಸಿಇಒ ಸುರೇಶ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.