ಮಂಡ್ಯ: ‘ರೈತರ ಜೀವನಾಡಿ’ಯಾದ ಕೃಷ್ಣರಾಜಸಾಗರ ಜಲಾಶಯವು ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ.
ಈ ಸಂಭ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 4ನೇ ಬಾರಿಗೆ ಬಾಗಿನ ಅರ್ಪಿಸಲಿದ್ದಾರೆ.
ಈಗಾಗಲೇ 2013, 2014, 2024 ಈ ಮೂರು ವರ್ಷ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದ್ದಾರೆ.
‘ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124 ಅಡಿಯಷ್ಟು ನೀರು ಭರ್ತಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವೈದಿಕ ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಗಣಪತಿ ಪೂಜೆ, ವಿಷ್ಣು ಪಾರಾಯಣ ಹಾಗೂ ಕಾವೇರಿ ತಾಯಿಗೆ ಪೂಜೆ, ಹೋಮ ಹವನ ನಡೆಯುತ್ತಿದೆ.
ಮಹಿಳೆಯರು ಪೂರ್ಣಕುಂಭದ ಸ್ವಾಗತ ನೀಡಲಿದ್ದಾರೆ. ಡ್ಯಾಂ ಮೇಲ್ಭಾಗ ಮತ್ತು ಬೃಂದಾವನ ಉದ್ಯಾನದಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.
ತಳಿರು ತೋರಣಗಳು, ವಿವಿಧ ಪುಷ್ಪಗಳಿಂದ ಅಣೆಕಟ್ಟೆಯ ಮೆಟ್ಟಿಲು, ಸ್ತಂಭಗಳನ್ನು ಅಲಂಕಾರ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.