ADVERTISEMENT

ಪುಟ್ಟಣ್ಣಯ್ಯ ಇಲ್ಲದ ರೈತಸಂಘಕ್ಕೆ ಗ್ರಹಣ

ಬಿಜೆಪಿ ಸರ್ಕಾರದ ಮೇಲೆ ರೈತ ಮುಖಂಡರಿಗೆ ಮೃದು ಧೋರಣೆ ಏಕೆ; ಹಿರಿಯರ ಪ್ರಶ್ನೆ

ಎಂ.ಎನ್.ಯೋಗೇಶ್‌
Published 14 ಅಕ್ಟೋಬರ್ 2019, 19:45 IST
Last Updated 14 ಅಕ್ಟೋಬರ್ 2019, 19:45 IST

ಮಂಡ್ಯ: ಅವಧಿ ಮೀರುತ್ತಿರುವ ಕಬ್ಬು ಸಾಗಿಸಲು ಸಾಧ್ಯವಾಗದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಷ್ಟ ಭೀತಿಯಲ್ಲಿರುವ ರೈತರ ಪರ ಗಟ್ಟಿಯಾಗಿ ನಿಲ್ಲಬೇಕಾಗಿದ್ದ ರೈತಸಂಘ ಮೌನಕ್ಕೆ ಜಾರಿದೆ. ‘ಕೆ.ಎಸ್‌.ಪುಟ್ಟಣ್ಣಯ್ಯ ಬದುಕಿದ್ದರೆ ಹೀಗೆ ಸುಮ್ಮನೆ ಕೂರುತ್ತಿದ್ದರಾ’ ಎಂಬ ಮಾತು ಬಡರೈತರ ನಾಲಗೆ ಮೇಲೆ ಹರಿದಾಡುತ್ತಿದೆ.

ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಮೃತಪಟ್ಟು ಒಂದೂವರೆ ವರ್ಷವಾಗಿದೆ. ಅವರು ನಿಧನರಾದ ನಂತರ ರೈತಸಂಘದಲ್ಲಿ ಒಂದು ರೀತಿಯ ಶೂನ್ಯ ಆವರಿಸಿದೆ. ಹೋರಾಟಗಳು ಕೇವಲ ನಾಮಮಾತ್ರಕ್ಕೆ ಎಂಬಂತಾಗಿವೆ. ರೈತರ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಪುಟ್ಟಣ್ಣಯ್ಯ ಅವರು ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು. ಸದನದಲ್ಲಿ ಗಟ್ಟಿ ಧ್ವನಿಯಾಗಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಆದರೆ ಈಗ ಸದನದ ಒಳಗೆ, ಹೊರಗೆ ರೈತಧ್ವನಿಗೆ ಗ್ರಹಣ ಹಿಡಿದಂತಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ರೈತಸಂಘ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೇಷರತ್‌ ಬೆಂಬಲ ನೀಡಿದ್ದವು. ಅಲ್ಲಿಂದ ರೈತಸಂಘ ಹಾಗೂ ಬಿಜೆಪಿ ನಡುವೆ ಒಂದು ರೀತಿಯ ಸ್ನೇಹ ಆರಂಭವಾಯಿತು. ಅದು ಈಗಲೂ ಮುಂದುವರಿದಿರುವ ಕಾರಣ ರೈತರ ಸಮಸ್ಯೆಗೆ ಪರಿಹಾರ ಕೇಳುವ ಗಟ್ಟಿ ಧ್ವನಿಯನ್ನು ರೈತಸಂಘ ಕಳೆದುಕೊಂಡಿದೆ ಎಂದು ಹಿರಿಯ ರೈತ ಮುಖಂಡರು ನೋವು ವ್ಯಕ್ತಪಡಿಸುತ್ತಾರೆ.

ADVERTISEMENT

20 ತಿಂಗಳು ಸಮೀಪಿಸುತ್ತಿರುವ ಕಬ್ಬು ಅರೆಯುವಂತೆ ರೈತರು ಸಕ್ಕರೆ ಕಾರ್ಖಾನೆಗಳಿಗೆ ಎಡತಾಕುತ್ತಿದ್ದಾರೆ. ಫೀಲ್ಡ್‌ಮ್ಯಾನ್‌ಗಳ ಮುಂದೆ ಗೋಳಿಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಕಬ್ಬು ಬಿದ್ದು ಚೆಲ್ಲಾಡುತ್ತಿದೆ. ಸೋಲಂಗಿಯೊಡೆದ ಕಬ್ಬು ನೆಲಕ್ಕುರುಳುತ್ತಿದ್ದು ಇಳುವರಿ ಕಳೆದುಕೊಳ್ಳುತ್ತಿದೆ. ಜಿಲ್ಲಾಡಳಿತ ತೆರದಿರುವ ಸಹಾಯವಾಣಿಯಲ್ಲಿ ಕೇಳುವವರೇ ಇಲ್ಲವಾಗಿದ್ದಾರೆ. ಅಧಿಕಾರಿಗಳು ಕೇವಲ ಸಭೆ ನಡೆಸುವುದಕ್ಕಷ್ಟೇ ಸೀಮಿತವಾಗಿದ್ದಾರೆ. ದಿಕ್ಕು ತೋಚದಂತಾದ ರೈತರು ಅತ್ಯಂಕ ಕಡಿಮೆ ಬೆಲೆಗೆ ಆಲೆಮನೆ, ಗೋಲಿ ಬೆಲ್ಲಕ್ಕೆ ಕಬ್ಬು ಮಾರಾಟ ಮಾಡುತ್ತಿದ್ದಾರೆ.

ರೈತರ ಗಂಭೀರ ಸಮಸ್ಯೆ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕಾದ ರೈತಸಂಘ ಮುಖಂಡರು ಬಿಜೆಪಿ ಮೇಲೆ ಮೃದು ಧೋರಣೆ ಹೊಂದಿದ್ದಾರೆ. ಹೋರಾಟದ ಸೊಲ್ಲು ಅಡಗಿದೆ. ಉಸ್ತುವಾರಿ ಸಚಿವ ಆರ್‌.ಅಶೋಕ್‌ ಬಂದಾಗ ಅವರನ್ನು ಪ್ರಶ್ನಿಸುವ ಬದಲು ಪ್ರವಾಸಿ ಮಂದಿರದಲ್ಲಿ ಕುಳಿತು ಸಭೆ ನಡೆಸುತ್ತಾರೆ. ಹೆದ್ದಾರಿ ತಡೆ, ರೈತರ ಹೋರಾಟಗಳು ಕುಗ್ಗುತ್ತಿವೆ. ಇಂತಹ ಸಂದರ್ಭದಲ್ಲಿ ದಿವಂಗತ ಪುಟ್ಟಣ್ಣಯ್ಯ ಅವರ ನೆನಪುಗಳು ರೈತಸಂಘದ ಹಿರಿಯ ಮನಸ್ಸುಗಳನ್ನು ಕಾಡುತ್ತಿದೆ.

‘ಪುಟ್ಟಣ್ಣಯ್ಯ ಅವರು ಕೂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಆದರೆ ರೈತರು ಸಮಸ್ಯೆಗೆ ಸಿಲುಕಿದಾಗ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು. ಸಮಸ್ಯೆಗಳೊಂದಿಗೆ ಅವರು ಎಂದಿಗೂ ರಾಜಿಯಾಗಲಿಲ್ಲ. ಆದರೆ ಈಗ ರೈತಸಂಘದ ಉಸ್ತುವಾರಿ ಹೊತ್ತ ಮುಖಂಡರ ಧ್ವನಿಯಲ್ಲಿ ಹೋರಾಟದ ಕಿಚ್ಚು ಇಲ್ಲ’ ಎಂದು ಪ್ರಗತಿಪರ ಯುವರೈತ ಶಿವಶಂಕರ್‌ ಹೇಳಿದರು.

2ನೇ ಸಾಲಿನ ರೈತ ಮುಖಂಡರು ಹೋರಾಟದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ದರ್ಶನ್‌ ಪುಟ್ಟಣ್ಣಯ್ಯ ವಿದೇಶಿ ಉದ್ಯೋಗ, ವ್ಯವಹಾರ ಬಿಟ್ಟು ಬರಲು ಸಿದ್ಧರಿಲ್ಲ. ಹೊಸ ನಾಯಕತ್ವದ ವಿರುದ್ಧ ಬಂಡೆದ್ದಿರುವ ನಂಜುಂಡಸ್ವಾಮಿ ಮಕ್ಕಳು ಸಂಘದ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ಒಡೆದ ಮನಸ್ಸುಗಳಿಗೆ ತೇಪೆ ಹಾಕುವ ನಾಯಕತ್ವದ ಅವಶ್ಯಕತೆ ಇದೆ ಎಂದು ಹಿರಿಯ ಮುಖಂಡರು ತಿಳಿಸಿದರು.

‘ಕಳೆದ ಸಮ್ಮಿಶ್ರ ಸರ್ಕಾರ ರೈತರಿಗೆ ವಿಶ್ವಾಸ ದ್ರೋಹ ಮಾಡಿತು. ಅದು ರೈತಸಂಘ ವಿರೋಧಿಯಾಗಿತ್ತು. ಈಗ ಬಿಜೆಪಿ ಸರ್ಕಾರದ ಮುಂದೆ ಹಕ್ಕೋತ್ತಾಯ ಮಾಡುತ್ತಿದ್ದೇವೆ. ರೈತರ ಸಮಸ್ಯೆಗಳಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ಸಮಸ್ಯೆ ಆಲಿಸದ ಕಾಂಗ್ರೆಸ್‌, ಜೆಡಿಎಸ್‌

ಜಿಲ್ಲೆಯ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಜೆಡಿಎಸ್‌, ಕಾಂಗ್ರೆಸ್‌ ಮುಖಂಡರೂ ಆಲಿಸುತ್ತಿಲ್ಲ. ಲೋಕಸಭಾ ಚುನಾವಣೆ ಸೋಲಿನ ನಂತರ ‘ಅನುಭವಿಸಿ, ಸ್ವಾಭಿಮಾನಿಗಳ ಬಳಿ ಕೇಳಿಕೊಳ್ಳಿ’ ಎಂಬ ಧೋರಣೆ ದಳಪತಿಗಳದ್ದು. ಇನ್ನು ಕಾಂಗ್ರೆಸ್‌ ಮುಖಂಡರಿಗೆ ಕಬ್ಬು ಬೆಳೆಗಾರರ ಸಮಸ್ಯೆಗಳ ಮೇಲೆ ಆಸಕ್ತಿ ಇಲ್ಲ. ‘ನಮ್ಮ ಪಕ್ಷದಿಂದ ಶಾಸಕರೂ ಇಲ್ಲ, ಸಂಸದರೂ ಇಲ್ಲ. ನಾವು ಅಸಹಾಯಕರು’ ಎಂಬುದು ಕಾಂಗ್ರೆಸ್‌ ಮುಖಂಡರ ಧೋರಣೆ.

100 ಲಾರಿ ಎಲ್ಲಿ ಹೋಗುತ್ತಿವೆ?

ಹೊರ ಜಿಲ್ಲೆಗಳ ಕಾರ್ಖಾನೆಗಳ 100ಕ್ಕೂ ಹೆಚ್ಚು ಲಾರಿಗಳು ಜಿಲ್ಲೆಗೆ ಬಂದಿದ್ದು ಮೈಷುಗರ್‌, ಪಿಎಸ್‌ಎಸ್‌ಕೆ ವ್ಯಾಪ್ತಿಯ ಕಬ್ಬು ಕೊಂಡೊಯ್ಯುತ್ತಿವೆ ಎಂದು ಜಿಲ್ಲಾಡಳಿತ ತಿಳಿಸುತ್ತದೆ. ಆದರೆ ಇಲ್ಲಿಯವರೆಗೆ ಎಷ್ಟು ಟನ್‌ ಕಬ್ಬು ಬಣ್ಣಾರಿ ಅಮ್ಮನ್‌, ಕುಂತೂರು ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಆಗಿದೆ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರ ಇಲ್ಲವಾಗಿದೆ.

‘ರೈತರಿಂದ ಬಂದ ಅರ್ಜಿಗಳನ್ನು ಕಾರ್ಖಾನೆಗಳಿಗೆ ತಲುಪಿಸುತ್ತಿದ್ದೇವೆ. ಎಷ್ಟು ಕಬ್ಬು ಹೋಗಿದೆ ಎಂಬ ವಿಷಯ ನಮಗೆ ತಿಳಿಯುವುದಿಲ್ಲ’ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.