ADVERTISEMENT

ನಗರಸಭೆ: ಪೌರಕಾರ್ಮಿಕರ ನಿರ್ವಹಣೆ ವಿಫಲ

ಮರೀಚಿಕೆಯಾದ ಸ್ವಚ್ಛತೆ, ಚೆಲ್ಲಾಡುತ್ತಿರುವ ಕಸ, ಅಧಿಕಾರಿಗಳು, ಮೇಸ್ತ್ರಿಗಳ ನಿರ್ಲಕ್ಷ್ಯ ಆರೋಪ

ಎಂ.ಎನ್.ಯೋಗೇಶ್‌
Published 22 ಮಾರ್ಚ್ 2022, 12:37 IST
Last Updated 22 ಮಾರ್ಚ್ 2022, 12:37 IST
ಮಂಡ್ಯದ ಅಶೋಕ್‌ನಗರ 3ನೇ ಕ್ರಾಸ್‌ ತಿರುವಿನಲ್ಲಿ ಕಸದ ರಾಶಿ ಬಿದ್ದು ಚೆಲ್ಲಾಡುತ್ತಿರುವುದು
ಮಂಡ್ಯದ ಅಶೋಕ್‌ನಗರ 3ನೇ ಕ್ರಾಸ್‌ ತಿರುವಿನಲ್ಲಿ ಕಸದ ರಾಶಿ ಬಿದ್ದು ಚೆಲ್ಲಾಡುತ್ತಿರುವುದು   

ಮಂಡ್ಯ: ನಗರಸಭೆಯಲ್ಲಿ 250 ಮಂದಿ ಪೌರ ಕಾರ್ಮಿಕರು ಇದ್ದರೂ ನಗರದ ಸ್ವಚ್ಛತೆ ಮರೀಚಿಕೆಯಾಗಿದೆ. ನಗರಸಭೆ ಅಧಿಕಾರಿಗಳು, ಕಾರ್ಮಿಕರ ಗುತ್ತಿಗೆದಾರರು, ಮೇಸ್ತ್ರಿಗಳ ನಿರ್ಲಕ್ಷ್ಯದಿಂದ ನಗರದ ಸ್ವಚ್ಛತೆ ಇಲ್ಲವಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 70 ಮಂದಿ ಕಾಯಂ ಪೌರ ಕಾರ್ಮಿಕರು ಇದ್ದಾರೆ, 170 ಮಂದಿ ಹೊರಗುತ್ತಿಗೆ ಪೌರ ಕಾರ್ಮಿಕರು ಇದ್ದಾರೆ. ಇಷ್ಟು ಮಂದಿ ಪೌರಕಾರ್ಮಿಕರಿಂದ 35 ವಾರ್ಡ್‌ಗಳ ನಗರದ ಸೌಂದರ್ಯ ಕಾಪಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಅವರಿಂದ ಸ್ವಚ್ಛತೆ ಕೆಲಸ ಮಾಡಿಸಿಕೊಳ್ಳುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಪೌರಕಾರ್ಮಿಕರ ನಿರ್ವಹಣೆಯಲ್ಲಿ ಅಧಿಕಾರಿಗಳು ಸೋತಿದ್ದಾರೆ. ನಗರದ ಪ್ರಮುಖ ಭಾಗಗಳಲ್ಲಿ ಕಸ ಬಿದ್ದು ಚೆಲ್ಲಾಡುತ್ತಿದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.‌

ಬೆಂಗಳೂರು– ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ. ಮಧ್ಯಾಹ್ನ 12 ಗಂಟೆಯಾದರೂ ಕಸ ತೆರವು ಮಾಡಿರುವುದಿಲ್ಲ. ಆರ್‌.ಪಿ.ರಸ್ತೆ, ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಕಸದ ರಾಶಿಯಿಂದಾಗಿ ಬೀದಿ ನಾಯಿಗಳು ಕಚ್ಚಾಟಕ್ಕೆ ಇಳಿದಿರುತ್ತವೆ. ವಿ.ವಿ ರಸ್ತೆ, ಅಶೋಕ್‌ನಗರ, ವಿವೇಕಾನಂದ ರಸ್ತೆ, ಪೇಟೆಬೀದಿ, ಚಾಮುಂಡೇಶ್ವರಿ ರಸ್ತೆ, ನೂರಡಿ ರಸ್ತೆಗಳಲ್ಲಿರುವ ಕಸದ ಚೆಲ್ಲಾಡುತ್ತಿದ್ದರೂ ನಗರಸಭೆ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲ.

ADVERTISEMENT

ಅಶೋಕ್‌ ನಗರ 4, 5ನೇ ಕ್ರಾಸ್‌ ಸರ್ಕಾರಿ ವಸತಿ ಗೃಹಗಳಿರುವ ಪ್ರದೇಶದಲ್ಲಿ ಕಸದ ರಾಶಿಯಿಂದಾಗಿ ದುರ್ವಾಸನೆ ಕಾಡುತ್ತದೆ. ಇಲ್ಲಿರುವ ವಸತಿ ಗೃಹಗಳಲ್ಲಿ ಸರ್ಕಾರಿ ಅಧಿಕಾರಿಗಳು ನಿಯಮಿತವಾಗಿ ವಾಸವಿರುವುದಿಲ್ಲ. ವಸತಿ ಗೃಹಗಳು ಖಾಲಿ ಇರುವ ಕಾರಣ ಕಸ ಸಮಸ್ಯೆಯ ಬಗ್ಗೆ ಕೇಳುವವರೇ ಇಲ್ಲವಾಗಿದ್ದಾರೆ. ರಾತ್ರಿಯ ವೇಳೆ ಇಲ್ಲಿ ಬೆಳಕಿನ ವ್ಯವಸ್ಥೆ ಕಡಿಮೆ ಇದೆ, ಜನರು ಕಸವನ್ನು ತಂದು ರಸ್ತೆ ಬದಿಯಲ್ಲಿ ಸುರಿದು ಹೋಗುವುದು ಸಾಮಾನ್ಯವಾಗಿದೆ.

‘ನೂರಡಿ ರಸ್ತೆಯಲ್ಲಿ ಬೆಳಿಗ್ಗೆ 11 ಗಂಟೆಯಾದರೂ ಕಸದ ಗುಡ್ಡೆಗಳನ್ನು ಹಾಗೆಯೇ ಬಿಟ್ಟು ಹೋಗಿರುತ್ತಾರೆ. ತ್ಯಾಜ್ಯವನ್ನು ಬೀದಿ ನಾಯಿಗಳು ಚೆಲ್ಲಾಡಿರುತ್ತವೆ. ಪೌರಕಾರ್ಮಿಕರು ಕಸ ಗುಡಿಸಿದರೂ ಅದನ್ನು ಸಾಗಿಸುತ್ತಿಲ್ಲ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ದೂರು ಕೊಟ್ಟರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಸಿಬ್ಬಂದಿಯ ಮೇಲೆ ಹಿಡಿತವೇ ಇಲ್ಲ’ ಎಂದು ನೂರಡಿ ರಸ್ತೆಯ ವ್ಯಾಪಾರಿ ಎಸ್‌.ಸುರೇಶ್‌ ಆರೋಪಿಸಿದರು.

ಈಚೆಗೆ ನಗರಸಭೆ ಬಜೆಟ್‌ ಸಭೆಯಲ್ಲಿ ಪೌರ ಕಾರ್ಮಿಕರ ನಿಯೋಜನೆಗೆ ಸಂಬಂಧಿಸಿದಂತೆ ಸದಸ್ಯರು ಆಕ್ಷೇಪ ಎತ್ತಿದ್ದರು. ಪ್ರತಿ ವಾರ್ಡ್‌, ರಸ್ತೆಗೆ ಪ್ರತಿದಿನವೂ ಒಬ್ಬರನ್ನೇ ನೇಮಕ ಮಾಡಬೇಕು, ಅವರು ರಜೆ ಇದ್ದಾಗ ಮಾತ್ರ ಬೇರೆಯವರನ್ನು ನಿಯೋಜಿಸಬೇಕು. ಅಧಿಕಾರಿಗಳು ಪ್ರತಿದಿನ ಒಬ್ಬೊಬ್ಬರನ್ನು ನೇಮಕ ಮಾಡುವುದು ಯಾವ ಕಾರಣಕ್ಕೆ ಎಂದು ‌ಪ್ರಶ್ನಿಸಿದ್ದರು. ಇದಕ್ಕೆ ಸಮರ್ಪಕ ಉತ್ತರ ನೀಡಲು ಪೌರಾಯುಕ್ತ ಎಸ್‌.ಲೋಕೇಶ್‌ ವಿಫಲರಾಗಿದ್ದರು.

ಪೌರಕಾರ್ಮಿಕರ ವೇತನಕ್ಕೂ ಕನ್ನ: 34 ವಾರ್ಡ್‌ಗಳ ನಗರವನ್ನು ವಿವಿಧ 7 ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಪ್ರತಿ ವಿಭಾಗಕ್ಕೂ 35 ಜನರನ್ನು ನಿಯೋಜನೆ ಮಾಡಲಾಗಿದೆ. ಪೌರ ಕಾರ್ಮಿಕರನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಧನದಾಹದಿಂದಾಗಿ ನಗರದ ಸ್ವಚ್ಛತೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸ್ವತಃ ಕಾರ್ಮಿಕರೇ ದೂರುತ್ತಾರೆ. ಪೌರ ಕಾರ್ಮಿಕರ ವೇತನಕ್ಕೂ ಅಧಿಕಾರಿಗಳು, ಮೇಸ್ತ್ರಿಗಳು, ಗುತ್ತಿಗೆದಾರರು ಕನ್ನ ಹಾಕುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.

‘ನಾನು ರಜೆ ಹಾಕಿದ ದಿನವೂ ಹಾಜರಾತಿ ತೋರಿಸುತ್ತಾರೆ. ನನ್ನ ಖಾತೆಗೆ ಬಂದ ಹಣವನ್ನು ಕಡಿತ ಮಾಡಿಕೊಂಡು ಅದನ್ನು ತಮ್ಮ ಜೇಬಿಗೆ ಇಳಿಸುತ್ತಾರೆ. ನೂರಾರು ಕಾರ್ಮಿಕರಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿದರೆ ಸತ್ಯ ತಿಳಿಯುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಪೌರ ಕಾರ್ಮಿಕರೊಬ್ಬರು ಬೇಸರ ವ್ಯಕ್ತಪಡಿಸಿದರು.

******

ಒಬ್ಬರ ಹೆಸರಲ್ಲಿ ಇನ್ನೊಬ್ಬರ ನಿಯೋಜನೆ

ನಗರಸಭೆಯ ಕೆಲ ಕಾಯಂ ಪೌರ ಕಾರ್ಮಿಕರು ಬೀದಿಗಿಳಿದು ಕೆಲಸ ಮಾಡುವುದಿಲ್ಲ. ತಮ್ಮ ಹೆಸರಿನಲ್ಲಿ ಬೇರೊಬ್ಬರನ್ನು ಕೆಲಸ ಮಾಡಿಸುತ್ತಾರೆ. ಅವರಿಗೆ ₹ 3– ₹ 5 ಸಾವಿರ ವೇತನ ನೀಡುತ್ತಾರೆ. ಇದು ಕಾನೂನುಬಾಹಿರವಾಗಿದ್ದು ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ.

‘ಕಾಯಂ ಪೌರ ಕಾರ್ಮಿಕರ ಹೆಸರಿನಲ್ಲಿ ಕೆಲಸ ಮಾಡುವವರು ಸರಿಯಾಗಿ ಕೆಲಸ ಮಾಡುವುದಿಲ್ಲ. ಈ ಕಾರಣದಿಂದ ನಗರದ ಸ್ವಚ್ಛತೆ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ಸದಸ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.