ADVERTISEMENT

ತಮಿಳುನಾಡಿಗೆ ನೀರು: ಹೋರಾಟಕ್ಕೆ ದಸಂಸ, ವಕೀಲರ ಸಂಘ ಬೆಂಬಲ

ಕೇಂದ್ರ– ರಾಜ್ಯ ಸರ್ಕಾರಗಳ ಅಣಕು ಶವಯಾತ್ರೆ, ಪೊಲೀಸರ ಜೊತೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 14:37 IST
Last Updated 7 ಸೆಪ್ಟೆಂಬರ್ 2023, 14:37 IST
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕೇಂದ್ರ, ರಾಜ್ಯ ಸರ್ಕಾರಗಳ ಅಣಕು ಶವಯಾತ್ರೆ ನಡೆಸಿದರು
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕೇಂದ್ರ, ರಾಜ್ಯ ಸರ್ಕಾರಗಳ ಅಣಕು ಶವಯಾತ್ರೆ ನಡೆಸಿದರು   

ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದ ಸರ್‌ ಎಂ.ವಿ ಪ್ರತಿಮೆ ಎದುರು ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ದಲಿತ ಸಂಘರ್ಷ ಸಮಿತಿ ಹಾಗೂ ವಕೀಲರ ಸಂಘದ ಸದಸ್ಯರು ಬೆಂಬಲ ನೀಡಿದರು.

ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಕಟಣೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಹೋರಾಟ ಜಿಲ್ಲೆಯಾದ್ಯಂತ ಮುಂದುವರಿದಿದೆ. ನೀರು ಸ್ಥಗಿತಗೊಳಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ವೈವಿಧ್ಯಮಯ ಧರಣಿ, ಚಳವಳಿಗಳು ಮುಂದುವರಿದಿವೆ.

ಅಣಕು ಶವಯಾತ್ರೆ: ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಣಕು ಶವಯಾತ್ರೆ ನಡೆಸಿದರು.

ADVERTISEMENT

ನಗರದ ಜೆ.ಸಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಶವಯಾತ್ರೆ ನಡೆಸಿದ ಸಮಿತಿ ಕಾರ್ಯಕರ್ತರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಣಕು ಶವಗಳ ಪ್ರತಿಕೃತಿ ದಹಿಸಲು ಮುಂದಾದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರ ವಿರುದ್ಧವೇ ದಿಕ್ಕಾರ ಕೂಗಿದರು. ಸ್ಥಳಕ್ಕೆ ಬಂದ ಡಿವೈಎಸ್‌ಪಿ ಶಿವಮೂರ್ತಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಡೆಗೂ ಶವಗಳ ಪ್ರತಿಕೃತಿ ದಹಿಸಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟರು.

ದಸಂಸ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ ‘ಕಾವೇರಿ ಕೊಳ್ಳದಲ್ಲಿ ಮಳೆಯಿಲ್ಲದೇ ಅನಾವೃಷ್ಟಿಯ ಸಂಕಷ್ಟ ಕಾಲ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾವೇರಿ ಜಲ ಸಂಕಷ್ಟ ಸೂತ್ರ ರೂಪಿಸಲು ಮುಂದಾಗಬೇಕು. ಬರ ಪರಿಸ್ಥಿತಿಯಲ್ಲಿ ಜಿಲ್ಲೆಯ ರೈತರಿಗೆ, ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಈ ಸಂದರ್ಭದಲ್ಲಿ ನೀರು ಬಿಟ್ಟಿರುವುದು ಖಂಡನೀಯ’ ಎಂದು ಹೇಳಿದರು.

‘ಭಾರತ ಸಂವಿಧಾನದ ಅನ್ವಯ ರಾಷ್ಟ್ರೀಯ ವೈಜ್ಞಾನಿಕ ಜಲನೀತಿ ರೂಪಿಸಲು, ಕೇಂದ್ರ ಸರ್ಕಾರ ಈ ಕೂಡಲೇ ಮುಂದಾಗಬೇಕು. ಆ ಮೂಲಕ ರಾಜ್ಯ–ರಾಜ್ಯಗಳ ನಡುವೆ ಸಮನ್ವಯತೆ ಕಾಪಾಡುವ ಗುರುತರ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿರ್ವಹಿಸಬೇಕು. ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅಗುತ್ತಿರುವ ಅನ್ಯಾಯವನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಅಂದಾನಿ, ಸೋಮಶೇಖರ್, ಶಿವರಾಜ್‌, ಕೆ.ಎಂ.ಶ್ರೀನಿವಾಸ್‌, ಸುರೇಶ್‌ ಕುಮಾರ್, ಬಲರಾಮು, ಆನಂದ ಇದ್ದರು.

ವಕೀಲರ ಸಂಘ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾ ರೈತ ಹಿರರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ನೀಡಿದರು

ಕೋರ್ಟ್‌ ಕಲಾಪ ಬಹಿಷ್ಕರಿಸಿ ಧರಣಿಯಲ್ಲಿ ಭಾಗಿ ವಕೀಲರ ಸಂಘದ ಸದಸ್ಯರು ಕೋರ್ಟ್‌ ಕಲಾಪ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು. ವಕೀಲರ ಸಂಘದ ಆವರಣದಿಂದ ಮೆರವಣಿಗೆಯಲ್ಲಿ ಹೊರಟ ವಕೀಲರು ಜಯಚಾಮರಾಜೇಂದ್ರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸರ್‌ಎಂ.ವಿ ಪ್ರತಿಮೆವರೆಗೂ ಮೆರವಣಿಗೆ ಸಾಗಿ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡರು ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿ ‘ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳನ್ನು ಬರಿದು ಮಾಡಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ನಮ್ಮ ರೈತರ ಹಿತ ಮರೆತು ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಜನತೆಗೆ ಕುಡಿಯಲು ನೀರು ಸಿಗದಂತಹ ಸಂಕಷ್ಟ ತಂದೊಡ್ಡಲಿದೆ ಕಾವೇರಿ ವಿಚಾರದಲ್ಲಿ ರಾಜಕಾರಣಿಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು’ ಎಂದರು ಆಕ್ರೊಶ ವ್ಯಕ್ತಪಡಿಸಿದರು. ‘ಸುಪ್ರೀಂ ಕೋರ್ಟ್‌ ಸೆ.21ರವರೆಗೆ ವಿಚಾರಣೆ ಮುಂದೂಡಿದೆ ಅಲ್ಲಿಯವರೆಗೆ ನೀರು ಬಿಡಲು ನೀರು ಎಲ್ಲಿದೆ? ಜಲಾಶಯಗಳಿಂದ ಬಿಡುಗಡೆ ಮಾಡಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಕಾವೇರಿ ನದಿ ನೀರಿನ ವಿಚಾರದಲ್ಲಿ ವಾದ ಮಾಡುತ್ತಿರುವ ವಕೀಲರಿಗೆ ಸಮರ್ಪಕ ಮಾಹಿತಿ ಒದಗಿಸಲು ಸರ್ಕಾರ ಮುಂದಾಗಬೇಕು. ಸಮರ್ಪಕ ಮಾಹಿತಿ ಇಲ್ಲದೆ ವಾದ ಮಾಡಲು ಸಾಧ್ಯವಿಲ್ಲ’ ಎಂದರು. ಸಂಘದ ಉಪಾಧ್ಯಕ್ಷ ಕೆ.ಎಲ್.ಮರಿಸ್ವಾಮಿ ಕಾರ್ಯದರ್ಶಿ ಸಿದ್ದರಾಜು ಜಂಟಿ ಕಾರ್ಯದರ್ಶಿ ಮಹದೇವ್ ಖಜಾಂಚಿ ಮಹೇಶ್ ನಿವೇದಿತಾ ಹೇಮಾ ರಾಜೀವ ತಿರುಮಲಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.