ADVERTISEMENT

ಸಾಲ ಮನ್ನಾ: 92,350 ರೈತರ ₹ 418 ಕೋಟಿ ಹಣ ಜಮೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 18:45 IST
Last Updated 16 ಅಕ್ಟೋಬರ್ 2019, 18:45 IST
ಎಲ್‌.ಆರ್‌.ಶಿವರಾಮೇಗೌಡ
ಎಲ್‌.ಆರ್‌.ಶಿವರಾಮೇಗೌಡ   

ಮಂಡ್ಯ: ‘ಜಿಲ್ಲೆಯ 2,350 ರೈತ ಕುಟುಂಬಗಳ ₹ 418 ಕೋಟಿ ಸಾಲ ಮನ್ನಾ ಆಗಿದೆ. ಅದರ ಸಂಪೂರ್ಣ ವಿವರವುಳ್ಳ ಪುಸ್ತಕ ಪ್ರಕಟಿಸಲಾಗಿದೆ’ ಎಂದು ಜೆಡಿಎಸ್‌ ಮುಖಂಡ ಎಲ್.ಆರ್.ಶಿವರಾಮೇಗೌಡ ಹೇಳಿದರು.

ಬುಧವಾರ ’ರೈತರ ಬೆಳೆ ಸಾಲಮನ್ನಾ; ಲಕ್ಷಾಂತರ ರೈತರಿಗೆ ಅನುಕೂಲ' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಬಿಜೆಪಿ ಮುಖಂಡರು ರೈತರ ಸಾಲ ಮನ್ನಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ರೈತರ ₹ 48 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದೀಗ ಅಧಿಕೃತ ದಾಖಲೆಯನ್ನು ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 1,11,399 ರೈತರ ಪೈಕಿ 92,350 ರೈತರ ಸಾಲಮನ್ನಾ ಆಗಿದೆ. ₹ 526. ಕೋಟಿ ಸಾಲದಲ್ಲಿ ಈಗಾಗಲೇ 418 ಕೋಟಿ ಹಣ ಸಹಕಾರ ಸಂಘಕ್ಕೆ ಜಮೆಯಾಗಿದೆ. ಇದಲ್ಲದೆ, ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ₹ 136 ಕೋಟಿ ಸಾಲ ಮನ್ನಾ ಆಗಿದೆ’ ಎಂದರು.

ADVERTISEMENT

‘ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಅಧಿಕೃತ ಮತ್ತು ನಿಖರ ಮಾಹಿತಿಯನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆ. ಜೆಡಿಎಸ್‌ ಪಕ್ಷ ಸದಾ ಬಡವರ ಪರ ನಿಲ್ಲುತ್ತದೆ. ರಾಜ್ಯ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರ ಸಾಲ ಮನ್ನಾ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಕೇಂದ್ರದಲ್ಲಿಯೂ ತಮ್ಮದೇ ಸರ್ಕಾರವಿದ್ದರೂ ನೆರೆ ಸಂತ್ರಸ್ತರಿಗೆ ಪರಿಹಾರ ತರುವಲ್ಲಿ ವಿಫಲವಾಗಿದೆ. ₹ 35 ಸಾವಿರ ಕೋಟಿ ನಷ್ಟವಾಗಿದ್ದರೂ ಕೇವಲ ₹ 1,200 ಕೋಟಿ ನೀಡಿ ತುಟಿಗೆ ಬಣ್ಣ ಹಚ್ಚಿದ್ದಾರೆ’ ಎಂದು ಆರೋಪಿಸಿದರು.

‘ಮೈಷುಗರ್, ಪಿಎಸ್ಎಸ್‌ಕೆ ಪುನಶ್ಚೇತನಕ್ಕೆ ಎಚ್.ಡಿ.ಕುಮಾರಸ್ವಾಮಿ ಆಸಕ್ತಿ ತೋರಿಸಿದ್ದರು. ಮೈಷುಗರ್ ಬದಲು ಹೊಸ ಕಾರ್ಖಾನೆ ಮಾಡುವುದಾಗಿ ಘೋಷಿಸಿದ್ದರು. ಇದೀಗ ಬಿಜೆಪಿ ಸರ್ಕಾರ ಹೊಸ ಕಾರ್ಖಾನೆ ಸ್ಥಾಪನೆಗೆ ಮುಂದಾಗಬೇಕು. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕಬ್ಬನ್ನು ಅರೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ರೈತರ ಕಬ್ಬು ಅರೆಸಿ ಅವರನ್ನು ಕಾಪಾಡಬೇಕು’ಎಂದು ಹೇಳಿದರು.

‘ಶಾಸಕ ಸಾ.ರಾ.ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಇನ್ನು ಮೈಸೂರು ಜಿಲ್ಲೆ ವಿಭಜನೆ ಬಗ್ಗೆ ಎಚ್.ವಿಶ್ವನಾಥ್ ಏಕೆ ಮಾತನಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ ಅವರಿಗೆ ಕಾಳಜಿ ಇದ್ದಿದ್ದರೆ ಮೈತ್ರಿ ಸರ್ಕಾರ ಇದ್ದಾಗಲೇ ಕೇಳಬೇಕಾಗಿತ್ತು’ ಎಂದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.