ADVERTISEMENT

ಮದ್ದೇನಹಟ್ಟಮ್ಮ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 12:51 IST
Last Updated 16 ಏಪ್ರಿಲ್ 2025, 12:51 IST
ನಾಗಮಂಗಲ ತಾಲ್ಲೂಕಿನ ಮದ್ದೇನಹಟ್ಟಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ನೆರವೇರಿತು
ನಾಗಮಂಗಲ ತಾಲ್ಲೂಕಿನ ಮದ್ದೇನಹಟ್ಟಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ನೆರವೇರಿತು    

ನಾಗಮಂಗಲ: ತಾಲ್ಲೂಕಿನ ದೇವಲಾಪುರ ಹೋಬಳಿಯ ಮದ್ದೇನಹಟ್ಟಿ ಗ್ರಾಮದಲ್ಲಿ ಮದ್ದೇನಹಟ್ಟಮ್ಮನ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಮೂಲ ಉದ್ಭವಿ ಮಹಾದೇವಸ್ಥಾನ ಎಂದೇ ಪ್ರಖ್ಯಾತಿ ಪಡೆದಿರುವ ಮದ್ದೇನಹಟ್ಟಮ್ಮ ದೇವಿಯ ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳ ಭಕ್ತರು ಪೂಜೆ, ಹರಕೆ ಸಲ್ಲಿಸಿದರು.

ಮಂಗಳವಾರ ರಾತ್ರಿ ಸಂಪನಹಳ್ಳಿ ಕೆಂಪ ನಂಜುಂಡೇಶ್ವರ, ಯಡವನಹಳ್ಳಿ ಕೊಂಡದ ಬೀರೇಶ್ವರ, ಜೋಳಸಂದ್ರದ  ಚೋಳರಾಯಸ್ವಾಮಿ ದೇವರುಗಳನ್ನು ಮದ್ದುಗುಂಡು, ಬಾಣಬಿರುಸುಗಳು ಸೇರಿದಂತೆ ಜವಳಿ ಕುಣಿತದೊಂದಿಗೆ ಅದ್ಧೂರಿಯಾಗಿ ಗ್ರಾಮಸ್ಥರು ಗ್ರಾಮಕ್ಕೆ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿದರು. ಅಲ್ಲದೇ ಜಾತ್ರೆಗೆ ರಾತ್ರಿಯಿಂದಲೇ ಆಗಮಿಸುವ ಭಕ್ತಾಧಿಗಳಿಗೆ ದೇವಾಲಯ ಮತ್ತು ಗ್ರಾಮದ ವತಿಯಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಮಂಗಳವಾರ ರಾತ್ರಿಯಿಡೀ ಗ್ರಾಮದಲ್ಲಿ ಮದ್ದೇನಟ್ಟಮ್ಮ ದೇವಿಯ ಮೆರವಣಿಗೆ ನಡೆಯಿತು. ಜೊತೆಗೆ ಜಾತ್ರೆಯ ಹಿನ್ನೆಲೆಯಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ಮೆರವಣಿಗೆಯಲ್ಲಿ ತಮಟೆ, ಡೋಲು, ಪೂಜೆ ಕುಣಿತ ಮತ್ತು ಸೋಮನ ಕುಣಿತ ಸೇರಿದಂತೆ ಜನಪದ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿದ್ದವು.

ADVERTISEMENT

ಅಲ್ಲದೇ ಬುಧವಾರ ಮುಂಜಾನೆ ಜರುಗುವ ಕೊಂಡೋತ್ಸವದಲ್ಲಿ ದೇವಾಲಯದ ಅರ್ಚಕರು, ಭಕ್ತರು ಮತ್ತು ಆರತಿ ಹೊತ್ತ ಮಹಿಳೆಯರು ಕೊಂಡವನ್ನು ಹಾಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಜೊತೆಗೆ ಕೊಂಡದ ಬಂಡಿಗಳ ಮೆರವಣಿಗೆ ಮತ್ತು ಮಡೆಗಳನ್ನು ಮಡಿಯ ಮೇಲೆ ಕರೆತರಲಾಗಿತ್ತು. ಹೂವುಹೊಂಬಾಳೆ, ಅಗ್ನಿಕೊಂಡ ಹಾಯ್ದ ನಂತರ ಹಲಗೆ ದೇವರುಗಳು ಮತ್ತು ದೇವರುಗಳ ಮೆರವಣಿಗೆಯಲ್ಲಿ ಮಾವಿನಕೆರೆ ಗ್ರಾಮದ ವೀರ ಮಕ್ಕಳ ಕುಣಿತ ಬಹು ಸಂಭ್ರಮದಿಂದ ನಡೆಯಿತು. ಕೊಂಡೋತ್ಸವದ ನಂತರ ಹರಿಕೆ ಹೊತ್ತ ಭಕ್ತರು ಬಾಯಿ ಬೀಗ ಹಾಕಿಸಿಕೊಳ್ಳುವ ಜೊತೆಗೆ ಮಡೆ ಆರತಿಯೊಂದಿಗೆ ದೇವರುಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಅಂಗವಾಗಿ ದೊಡ್ಡ ಹೊಸಗಾವಿ ಗ್ರಾಮಸ್ಥರಿಂದ ಬಿರುಡೇ ಕಂಭ ಮತ್ತು ಆರತಿ ಸೇವೆ ನೆರವೇರಿತು.ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು. ತಾಲ್ಲೂಕು ಆಡಳಿತ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ತುರ್ತು ಆರೋಗ್ಯ ಸೇವೆ ಮತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ನಾಗಮಂಗಲ ತಾಲ್ಲೂಕಿನ ಮದ್ದೇನಹಟ್ಟಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.