ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರದಲ್ಲಿ ಕಾಶಿ ವಿಶ್ವನಾಥ ದೇವರ ಬ್ರಹ್ಮ ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ದೇವಾಲಯದಲ್ಲಿ ಮೂಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕಾಗಿ ಕಾಷ್ಟ ರಥವನ್ನು ಬಗೆ ಬಗೆಯ ಹೂವುಗಳು ಮತ್ತು ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ 11.30ಕ್ಕೆ ರಥೋತ್ಸವ ಆರಂಭವಾಯಿತು. ಗ್ರಾಮದ ಮುಖ್ಯ ಬೀದಿಗಳಲ್ಲಿ ರಥವು ಸಾಗಿತು. ಯುವಕರು, ಮಹಿಳೆಯರಾದಿಯಾಗಿ ಭಕ್ತರು ದೇವರ ಸ್ಮರಣೆ ಮಾಡುತ್ತಾ ಉತ್ಸಾಹದಿಂದ ರಥವನ್ನು ಎಳೆದರು. ರಥ ಸಾಗಿದ ಮಾರ್ಗದ ಉದ್ದಕ್ಕೂ ಪೂಜೆಗಳು ನಡೆದವು. ರಥೋತ್ಸವದಲ್ಲಿ ಪಾಲ್ಗೊಂಡಿದ್ದವರು ರಥಕ್ಕೆ ಹಣ್ಣು, ದವನ ಎಸೆದರು.
ದೇವಾಲಯದ ಸುತ್ತಲಿನ ಬೀದಿಗಳಲ್ಲಿ ಸುಮಾರು ಒಂದು ತಾಸು ರಥೋತ್ಸವ ಜರುಗಿತು. ಸ್ವಸ್ಥಾನಕ್ಕೆ ಆಗಮಿಸಿದ ರಥದಿಂದ ಉತ್ಸವ ಮೂರ್ತಿಯನ್ನು ಇಳಿಸಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಇದಕ್ಕೂ ಮುನ್ನ ಮೂಲ ದೇವರಿಗೆ ಪುಣ್ಯಾಹ, ಗಣಪತಿ ಪೂಜೆ, ಅಂಕುರಾರ್ಪಣೆ, ಧ್ವಜಾರೋಹಣ, ಗಿರಿಜಾ ಕಲ್ಯಾಣೋತ್ಸವ ಇತರ ಕೈಂಕರ್ಯಗಳು ನಡೆದವು. ಮಹದೇವಪುರ ಮತ್ತು ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಏ.13ರಂದು ಅಶ್ವಾರೋಹಣೋತ್ಸವ, 14ರಂದು ಅವಭೃತ ತೀರ್ಥಸ್ನಾನ, ಗೋಧೂಳಿ ಲಗ್ನದಲ್ಲಿ ತೆಪ್ಪೋತ್ಸವ, 15ರಂದು ಮಹಾ ಸಂಪ್ರೋಕ್ಷಣಾ, ಕೈಲಾಸ ಅವರೋಹಣೋತ್ಸವ, 16ರಂದು ಮಹಾಭಿಷೇಕ ಮತ್ತು ನಂದಿ ವಾಹನೋತ್ಸವ ಜರುಗಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಡಿ.ಎಸ್. ವೆಂಕಟೇಶಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.