ADVERTISEMENT

ಮಳವಳ್ಳಿ | ತಳಗವಾದಿಯಲ್ಲಿ ಸಂಭ್ರಮದ ದೊಡ್ಡಹಬ್ಬ

ಹೆಬ್ಬಾರೆಯ ಅದ್ದೂರಿ ಮೆರವಣಿಗೆ, ಆಕರ್ಷಕ ವಿದ್ಯುತ್ ದೀಪಾಲಂಕಾರ,

ಟಿ.ಕೆ.ಲಿಂಗರಾಜು
Published 26 ಮಾರ್ಚ್ 2025, 6:53 IST
Last Updated 26 ಮಾರ್ಚ್ 2025, 6:53 IST
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ಗ್ರಾಮ ದೇವತೆ ಉಮಾಮಹೇಶ್ವರಿ ದೊಡ್ಡಹಬ್ಬದಲ್ಲಿ ಭಾನುವಾರ ರಾತ್ರಿ ಹೆಬ್ಬಾರೆ ಮೆರವಣಿಗೆ ನಡೆಯಿತು.
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ಗ್ರಾಮ ದೇವತೆ ಉಮಾಮಹೇಶ್ವರಿ ದೊಡ್ಡಹಬ್ಬದಲ್ಲಿ ಭಾನುವಾರ ರಾತ್ರಿ ಹೆಬ್ಬಾರೆ ಮೆರವಣಿಗೆ ನಡೆಯಿತು.   

ಮಳವಳ್ಳಿ:  ತಳಗವಾದಿ ಗ್ರಾಮದಲ್ಲಿ  ಭಾವೈಕ್ಯದ ಸಂಕೇತವಾಗಿ 9 ವರ್ಷಕ್ಕೊಮ್ಮೆ 25 ದಿನ ವಿಜೃಂಭಣೆಯಿಂದ ಆಚರಿಸುವ ಗ್ರಾಮ ದೇವತೆ ಉಮಾಮಾಹೇಶ್ವರಿ ದೊಡ್ಡಹಬ್ಬ ಆರಂಭವಾಗಿದೆ.

ಮಾ.6ರಿಂದ ಆರಂಭವಾಗಿರುವ ಮಾ.6ರಿಂದ ಮಾ.30ರವರೆಗೆ ಹಬ್ಬ ನಡೆಯುತ್ತದೆ. ದೊಡ್ಡಹಬ್ಬವನ್ನು  ಒಗ್ಗಟ್ಟಿನಿಂದ ಆಚರಿಸಿಕೊಂಡು ಬರುತ್ತಿದ್ದಾರೆ.  ಗ್ರಾಮದ ಎಲ್ಲ ರಸ್ತೆ, ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.  ಗ್ರಾಮ ದೇವತೆ ಉಮಮಾಹೇಶ್ವರಿ ದೇವಸ್ಥಾನಕ್ಕೆ ವಿಶೇಷ ಮೆರಗು ನೀಡಲಾಗಿದೆ.

ಗ್ರಾಮದ ಎಲ್ಲ ಕುಲದ 11 ತೆಂಡೆಯ ಯಜಮಾನರು, ಮೂವರು ಬೀದಿಗೌಡರು ಹಾಗೂ ನಾಡಗೌಡರು ಸೇರಿದಂತೆ ಗ್ರಾಮದ ಎಲ್ಲ ಕೋಮಿನ ಯಜಮಾನರು ದೊಡ್ಡಹಬ್ಬದ ಸಿದ್ಧತೆಗಳನ್ನು ನಡೆಸುತ್ತಾರೆ.
ಮಾ.6ರಂದು ಗ್ರಾಮದ ಹೊರವಲಯದ ಹಿರಿಯಮ್ಮನ ದೇವಸ್ಥಾನದ ಬಳಿ ಗೌಡನಕಟ್ಟೆಯಿಂದ ಕಂಬ(ಬಾಳೆಗಿಡ)ವನ್ನು ತಂದು ಮಾರಮ್ಮನ ಗುಡಿ ಬಳಿಯ ಕಂಬಕ್ಕೆ ಬಾಳೆಗಿಡವನ್ನು ಕಟ್ಟುವುದರ ಮೂಲಕ ಹಬ್ಬಕ್ಕೆ ಚಾಲನೆ ದೊರೆಯುತ್ತದೆ.

ADVERTISEMENT

 ಗುಜ್ಜಮ್ಮ, ಕೆಂಗಳಮ್ಮ ದೇವರು ತಂದು, ನಂತರ ಹಸೆ ಕಂಬದ ಪೂಜೆ, ಮಾ.23ರಂದು ಹೆಬ್ಬಾರೆ(ಮಸಣಮ್ಮ, ಮಂಚಮ್ಮ, ಹಟ್ಟಿಮಾರಮ್ಮನ)  ಅದ್ದೂರಿ ಮೆರವಣಿಗೆ ಮೂಲಕ ತಂದು ಗ್ರಾಮದ ಮಸಣಮ್ಮ, ಮಂಚಮ್ಮ, ಹಟ್ಟಿಮಾರಮ್ಮನ ದೇವಸ್ಥಾನದ ಹಸಿ ಚಪ್ಪರದಡಿ ಹಸೆ ಕಂಬದಲ್ಲಿ ಇಡಲಾಯಿತು.ಮಾ.24ರ ಸೋಮವಾರ ಬಿದುರಿನ ಕುರುತಟ್ಟೆ ಹಾಕುವುದು.  25ರಂದು ಮೀಸಲು ನೀರು, ಹಗಲು ಕುಣಿತ ಪ್ರದರ್ಶನ ನಡೆದವು.

  ಮಾ. 26ರಂದು ಆಕರ್ಷಣೆಯ ಹನ್ನೆರಡು ಸೆರಗು ವೇಷಧಾರಿಗಳು ಕುಣಿತ ಮತ್ತು ಮಧ್ಯಾಹ್ನ ಹುಚ್ಚೆತ್ತು ಬಿಡುವುದು ನಡೆಯಲಿದೆ. 27ರಂದು ತನಿಗೊಂಡ ಎರೆಯುವುದು.  28ರಂದು ನಡೆಯುವ ಬಂಡಿ ಉತ್ಸವದಲ್ಲಿ ಗ್ರಾಮದ ಗುರುಗಳು ಭಾಗಿಯಾಗಲಿದ್ದಾರೆ. ರಾತ್ರಿ ಗೌಡ್ನಕಟ್ಟೆ ಸನ್ನಿಧಿಯಲ್ಲಿ ಹಿರಿಯಮ್ಮ ದೇವರಿಗೆ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸುತ್ತಾರೆ. ಮಾ.29ರಂದು ಕೊಂಡದ ಉತ್ಸವ, ಅದೇ ದಿನ ಬಾಯಿಬೀಗ,  ಗುಲಂಗಜಿ ಅರತಿ ಮತ್ತು ಸುಡು ಮದ್ದು ಪ್ರದರ್ಶನ ಹಾಗೂ ಮಾ.30ರಂದು ಕೊಂಡೋತ್ಸವ ಮತ್ತು ಹಣ್ಣಿಡಿಗೆ ನಡೆಯಲಿದೆ.

 ಉಮಾಮಾಹೇಶ್ವರಿ ದೊಡ್ಡಹಬ್ಬಕ್ಕೆ ಚಾಲನೆ ನೀಡಿದ ಮಾ.24ರಿಂದ ಗ್ರಾಮದಲ್ಲಿ ಮಾಂಸಾಹಾರ ಮಾರಾಟ ಮತ್ತು ಸೇವನೆ,ಮದ್ಯ ಮಾರಾಟಕ್ಕೂ ನಿಷೇಧ ಮಾಡಲಾಗಿದೆ.  ಗ್ರಾಮದಲ್ಲಿ ಒಗ್ಗರಣೆ, ಮೆಣಸಿನಕಾಯಿ ಸುಡುವುದು ನಿಲ್ಲಿಸುವಂತೆ ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.

ಆಚರಣೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಉಳಿಸಿ ಮುಂದಿನ ಪೀಳಿಗೆಯವರು ಅದನ್ನು ಗೌರವಿಸಿ ಆಚರಿಸುವಂತಾಗಬೇಕು.
ದಿಲೀಪ್ ಕುಮಾರ್(ವಿಶ್ವ) ಗ್ರಾಮದ ಮುಖಂಡ
ಗ್ರಾಮದಲ್ಲಿ ಶತಮಾನಗಳಿಂದ ಎಲ್ಲ ಜಾತಿಯವರು ಒಗ್ಗಟ್ಟಿನಿಂದ ದೊಡ್ಡಹಬ್ಬವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಯುವಕರು ಸಹಕಾರ ನೀಡಬೇಕು.
ಚಿಕ್ಕಹನುಮಯ್ಯ ಗ್ರಾಮದ ನಾಡಗೌಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.