ಮಂಡ್ಯ: ‘ಮಿಮ್ಸ್ ಆಸ್ಪತ್ರೆಯನ್ನು ಉನ್ನತಿಕರಣಗೊಳಿಸುವ ಉದ್ದೇಶದಿಂದ ₹16 ಕೋಟಿ ವೆಚ್ಚದ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಮಂಡ್ಯ ಶಾಸಕ ಪಿ. ರವಿಕುಮಾರ್ ಹೇಳಿದರು.
ಮಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಂಡ್ಯ ಅಲ್ಲದೆ ರಾಮನಗರ ಮತ್ತು ತುಮಕೂರು ಜಿಲ್ಲೆಯ ಆಯ್ದ ಭಾಗಗಳಿಂದಲೂ ಮಿಮ್ಸ್ ಆಸ್ಪತ್ರೆಗೆ ಸಾರ್ವಜನಿಕರು ಚಿಕೆತ್ಸೆ ಪಡೆಯಲು ಬರುವುದರಿಂದ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಿಮ್ಸ್ ನಿರ್ದೇಶಕರ ಸತತ ಪ್ರಯತ್ನದಿಂದಾಗಿ ರೋಬೋಟಿಕ್ ರೇಡಿಯೊ ಥೆರಪಿಯನ್ನು ಸಹ ಇಂದಿನಿಂದ ಆರಂಭಿಸಲಾಗಿದೆ. ಮಿಮ್ಸ್ ಆಸ್ಪತ್ರೆಯನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗಲು ಮಂಡ್ಯ ಜಿಲ್ಲೆಗೆ ನೂತನ ಜಿಲ್ಲಾಸ್ಪತ್ರೆಯ ಅವಶ್ಯಕತೆಯಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮುಂದಿನ ಸಂಕ್ರಾಂತಿ ಹಬ್ಬದೊಳಗಾಗಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಶೇಕಡಾ 70ರಷ್ಟು ಆಸ್ಪತ್ರೆಯ ಅಭಿವೃದ್ಧಿ ಕೆಲಸ ಪೂರ್ಣಗೊಂಡಿದೆ. ಆಸ್ಪತ್ರೆಗೆ ಅಗತ್ಯವಾದ ಸಲಕರಣೆಗಳಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಮಂಡ್ಯ ಮಿಮ್ಸ್ ನಿರ್ದೇಶಕ ಡಾ.ಪಿ. ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಮುಡಾ ನಿರ್ದೇಶಕ ಕೃಷ್ಣ, ನಗರಸಭೆ ಸದಸ್ಯ ಶ್ರೀಧರ್ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.