ಮಂಡ್ಯ: ವೈದ್ಯಕೀಯ ಕ್ಷೇತ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಡ್ರೋನ್ ಮೂಲಕ ಔಷಧಗಳನ್ನು ತಲುಪಿಸಲು ಪ್ರಯತ್ನ ಮಾಡುತ್ತಿರುವ ಕೆಲಸವು ಒಂದು ಐತಿಹಾಸಿಕ ಕಾರ್ಯವಾಗಿದೆ ಎಂದು ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಹೇಳಿದರು.
ನಗರದ ಮಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಐಕಾಟ್ ಸಂಸ್ಥೆ ವತಿಯಿಂದ ಈಚೆಗೆ ಆಯೋಜಿಸಿದ್ದ ಮೆಡಿಕಲ್ ಡ್ರೋನ್ ಅಣುಕು ಕಾರ್ಯಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡ್ರೋನ್ ಗಳನ್ನು ಔಷಧ ಸಿಂಪಡಿಸುವಿಕೆ, ಗೊಬ್ಬರ ಹಾಕಲು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ ಎಂದರು.
ಎಷ್ಟೋ ತುರ್ತು ಸನ್ನಿವೇಶಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗದೆ ಅಥವಾ ಸರಿಯಾದ ಸಮಯಕ್ಕೆ ಔಷಧ ದೊರೆಯದೇ ರೋಗಿಗಳು ತಮ್ಮ ಉಸಿರು ಚೆಲ್ಲುವ ಅನಿವಾರ್ಯ ಉಂಟಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಡ್ರೋನ್ ಮೂಲಕ ಅಗತ್ಯ ಔಷಧ ಕಳಿಸುವುದರಿಂದ ಇಂತಹ ಅನೇಕ ಸಾವು ನೋವುಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕೆ. ಮೋಹನ್, ಜಿಲ್ಲಾ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ್, ಐಕಾಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಾಲಿನಿ ನಲ್ವಾಡ್, ಡಾ.ಚೇತನ್, ಅಂಬರ್ ವಿಂಗ್ಸ್ ಸಂಸ್ಥೆಯ ದಿವ್ಯಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.