ADVERTISEMENT

ಧರ್ಮಾಧಾರಿತ ಸಂಸ್ಥೆಗೆ ಬಿಸಿಯೂಟ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 14:29 IST
Last Updated 11 ನವೆಂಬರ್ 2019, 14:29 IST

ಮಂಡ್ಯ: ‘ಸರ್ಕಾರದ ಮಹತ್ವಾಕಾಂಕ್ಷಿ ಬಿಸಿಯೂಟ ಯೋಜನೆಯನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಧರ್ಮಾಧಾರಿತ ಸಂಸ್ಥೆಯಾಗಿರುವ ಇಸ್ಕಾನ್‌ಗೆ ನೀಡಿರುವುದು ಖಂಡನೀಯ. ಇದನ್ನು ವಿರೋಧಿಸಿ ನ.12, 13ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ಘಟಕದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಯಾವುದೇ ಲಿಂಗ, ಜಾತಿ ಭೇದವಿಲ್ಲದೇ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ 2001-2002ರಲ್ಲಿ ಅಕ್ಷರ ದಾಸೋಹ ಯೋಜನೆ ಜಾರಿಗೊಳಿಸಲಾಯಿತು. ಧರ್ಮಾಧಾರಿತ ಸಂಸ್ಥೆಗಳಿಗೆ ಟೆಂಡರ್‌ ನೀಡುವುದನ್ನು ನಮ್ಮ ಸಂಘಟನೆ ಹಲವು ವರ್ಷಗಳಿಂದಲೂ ಹೋರಾಟ ನಡೆಸಿತ್ತು. ಬಿಸಿಯೂಟ ಯೋಜನೆಗೆ ಖಾಸಗಿ ವ್ಯಕ್ತಿಗಳು ಬಂದರೆ ಶಾಲೆಗಳಲ್ಲಿ ಕೆಲಸ ಮಾಡುವ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ’ಎಂದು ಹೇಳಿದರು.

‘ಧಾರ್ಮಾಧಾರಿತ ಸಂಸ್ಥೆಗಳು ಊಟದಲ್ಲೂ ತಾರತಮ್ಯ ಮಾಡುತ್ತವೆ. ಈರುಳ್ಳಿ, ಬೆಳ್ಳುಳ್ಳಿ ಹಾಕಬಾರದು ಎಂಬ ನಿಯಮ ಜಾರಿಗೊಳಿಸುತ್ತವೆ. ಇದನ್ನು ಮಕ್ಕಳ ಮನಸ್ಸುಗಳ ಮೇಲೆ ಹೇರಬಾರದು. ಬೇರೆಲ್ಲೋ ಅಡುಗೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವಷ್ಟರಲ್ಲಿ ಊಟ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಸ್ಥಳದಲ್ಲೇ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರು ಬಹಳ ಸ್ವಚ್ಛತೆ ಕಾಪಾಡಿಕೊಳ್ಳುತ್ತಾರೆ. ಸರ್ಕಾರ ಇದನ್ನು ತಪ್ಪಿಸಿ ಖಾಸಗಿ ಸಂಸ್ಥೆಗಳಿಗೆ ನಿಡಿರುವುದು ಸರಿಯಲ್. ಮಂಡ್ಯದ ಜಿಲ್ಲಾ ಪಂಚಾಯಿತಿ ಕಚೇರಿ, ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಯಲಿದೆ’ ಎಂದರು.

ADVERTISEMENT

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಂಜುಳಾ, ಸಿ.ಕುಮಾರಿ, ಮಹದೇವಮ್ಮ, ಎಸ್.ವರಲಕ್ಷ್ಮಿ, ಸುನೀತಾ, ಸುನಂದ, ಎಂ.ಲಕ್ಷ್ಮಿ ಇತರರು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.