ADVERTISEMENT

ಮನ್‌ಮುಲ್‌ : ಲೀಟರ್‌ ಹಾಲಿಗೆ ₹2.50 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:28 IST
Last Updated 9 ಅಕ್ಟೋಬರ್ 2019, 20:28 IST
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಮಚಂದ್ರು ಮಾತನಾಡಿದರು
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಮಚಂದ್ರು ಮಾತನಾಡಿದರು   

ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್‌) ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರಿಗೆ ಅ.11ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ ₹2.50 ಹೆಚ್ಚಳ ಮಾಡಿದ್ದು, ರೈತರಿಗೆ ದಸರಾ ಹಾಗೂ ದೀಪಾವಳಿಯ ಕೊಡುಗೆ ನೀಡಿದೆ.

ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರಾಮಚಂದ್ರು, ‘ಹಾಲು ಉತ್ಪಾದಕರಿಗೆ ಈ ಹಿಂದೆ ಲೀಟರ್ ಹಾಲಿಗೆ ₹22.50 ನೀಡುತ್ತಿದ್ದು, ಈಗ ₹2.50 ಹೆಚ್ಚಳವಾಗಿರುವುದರಿಂದ ಇನ್ನು ಮುಂದೆ ಪ್ರತಿ ಲೀಟರ್ ಹಾಲಿಗೆ ₹25 ನೀಡಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ವಹಣಾ ವೆಚ್ಚಕ್ಕೆ ಪ್ರತಿ ಲೀಟರ್‌ಗೆ 80 ಪೈಸೆ ನೀಡಲಾಗುವುದು’ ಎಂದು ತಿಳಿಸಿದರು.

ಪ್ರವಾಹ ಸಂತ್ರಸ್ತರ ನೆರವಿಗಾಗಿ ಮನ್‌ಮುಲ್‌ನಿಂದ ₹25 ಲಕ್ಷವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ನೀಡಲಿದ್ದು, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚೆಕ್ ನೀಡಲಾಗುವುದು’ ಎಂದರು.

ADVERTISEMENT

ಸಂಕ್ರಾಂತಿ ವೇಳೆಗೆ ಒಕ್ಕೂಟದ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ಹಾಲು ಉತ್ಪಾದಕರಿಗೆ ಮತ್ತಷ್ಟು ಸಿಹಿ ಸುದ್ದಿ ನೀಡಲಾಗುವುದು. ಏಪ್ರಿಲ್ ತಿಂಗಳಿನಿಂದ ಹಾಲು ಉತ್ಪಾದಕರಿಗೆ ಬಾಕಿ ಉಳಿದುಕೊಂಡಿರುವ ₹6 ಪ್ರೋತ್ಸಾಹ ಧನವನ್ನೂ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಹೇಳಿದರು.

ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ವಿಶ್ವಾಸ ಪಡೆದು ಒಕ್ಕೂಟವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು. ಹಾಲು ಉತ್ಪಾದಕರಿಗೆ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಒಕ್ಕೂಟದ ಉಪಾಧ್ಯಕ್ಷ ರಘುನಂದನ್, ನಿರ್ದೇಶಕರಾದ ರೂಪಾ, ನೆಲ್ಲಿಗೆರೆಬಾಲು, ಎಚ್.ಟಿ.ಮಂಜಣ್ಣ, ವಿಶ್ವನಾಥ್, ರಾಮಚಂದ್ರು, ವ್ಯವಸ್ಥಾಪಕ ನಿರ್ದೇಶಕ ಎಚ್.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.