ಮದ್ದೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷ ಈ ಬಾರಿ ಸೋತಿದ್ದ, ಚುನಾವಣೆಯಲ್ಲಿ ಸೋಲು, ಗೆಲುವು ಸಹಜ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ಬೆಸಗರಹಳ್ಳಿಯ ಮಾನಸ ಎಜುಕೇಷನ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಉದ್ಘಾಟನೆ ಬಳಿಕ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣಾ ವೇಳೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಕೂಟವು ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ವಿಫಲವಾಗುವ ಜತೆಗೆ ಕರ್ನಾಟಕ ವಿಧಾನ ಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಅಧಿಕಾರ ಕಳೆದುಕೊಂಡಿತ್ತು. ಕಾಂಗ್ರೆಸ್ 136 ಸ್ಥಾನಗಳೊಡನೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದನ್ನು ಬಿ.ಜೆ.ಪಿ ನಾಯಕರು ಅರಿತಿಲ್ಲವೇ ಎಂದು ಪ್ರಶ್ನಿಸಿದರು.
ಸೋತವರು ಮತ್ತೆ ಗೆದ್ದ ಉದಾಹರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ. ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿನ ಮೊದಲ ಮತ್ತು ಪ್ರಸ್ತುತ ಸರ್ಕಾರಗಳ ಪರಿಸ್ಥಿತಿಯೇ ಉದಾಹರಣೆ ಎಂದರು.
ಮಂಡ್ಯ ಕೃಷಿ ವಿಶ್ವ ವಿದ್ಯಾಲಯಕ್ಕೆ ಹಾಸನ ಸೇರಿದಂತೆ ಇತರೆ ಜಿಲ್ಲೆಗಳ ಸೇರ್ಪಡೆ ಸಂಬಂಧವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಅವರು, ರೇವಣ್ಣ ಅವರಿಗೆ ಮಾತನಾಡುವ ಹಕ್ಕಿದೆ. ಹಾಗೇ ಹೇಳಿದಾಕ್ಷಣ ಸರ್ಕಾರದ ನೀತಿ ನಿಯಮ ಕೈಬಿಡಲು ಸಾಧ್ಯವಿಲ್ಲ. ಸರ್ಕಾರದ ನಿಯಮದಂತೆ ಮುಂದಿನ ಎಲ್ಲಾ ಪ್ರಕ್ರಿಯೆಗಳು ನಡೆಯಲಿದೆ ಎಂದರು.
ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿ.ಕೆ.ಜಗದೀಶ್, ಕಾರ್ಯದರ್ಶಿ ಎಚ್.ಪಿ.ನಾಗರಾಜು, ಖಜಾಂಚಿ ವಿ.ಕೆ.ಸನತ್ ಕುಮಾರ್, ಶೈಕ್ಷಣಿಕ ಸಲಹೆಗಾರ ಎಚ್.ಪಿ.ನಿಂಗರಾಜು, ಪ್ರಾಂಶುಪಾಲರಾದ ಪಿ.ಸಿ.ಪ್ರವೀಣ್ ಕುಮಾರ್, ಕೆ.ಮಮತಾ, ಮುಖ್ಯ ಶಿಕ್ಷಕರಾದ ಆರ್.ಪಲ್ಲವಿ, ಎನ್.ಶರತ್, ಚೈತ್ರಾ, ಬಸವರಾಜು, ಕಲಾವತಿ, ರಮೇಶ್, ಮುಖಂಡರಾದ ವಿಜಯೇಂದ್ರ, ಸುನಿಲ್ ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಸಿದ್ದರಾಮು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.