ಕಿಕ್ಕೇರಿ ಹೋಬಳಿಯ ಅಂಕನಹಳ್ಳಿಯಲ್ಲಿ ಸೋಮವಾರ ನೂತನ ರಂಗಮಂಟಪವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಶಾಸಕರಾದ ಎಚ್.ಟಿ. ಮಂಜು, ಸಿ.ಎನ್. ಬಾಲಕೃಷ್ಣ, ಸ್ವರೂಪ್, ಮುಖಂಡರಾದ ಹರೀಶ್‌ಗೌಡ, ಸಿ.ಎನ್. ಪುಟ್ಟಸ್ವಾಮಿಗೌಡ, ಬಿ.ಎಂ. ಕಿರಣ್ ಭಾಗವಹಿಸಿದ್ದರು
ಕಿಕ್ಕೇರಿ: ‘ಗ್ಯಾರಂಟಿ, ಭಾಗ್ಯ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಜೆಡಿಎಸ್ ರಾಜ್ಯ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಸೋಮವಾರ ರಂಗದ ಕುರ್ಜು (ರಂಗಮಂಟಪ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕುಟುಂಬ ಜಿಲ್ಲೆಯ ಜನತೆ ಎಂದೂ ಮರೆಯಲಾಗದು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ, ಜಿಲ್ಲೆಯ ಪ್ರಗತಿಗೆ ಬೃಹತ್ ಕನಸಿದೆ. ಕಾಂಗ್ರೆಸ್ ಜನತೆಯಲ್ಲಿ ಪೆನ್ ಪೇಪರ್ ಕೇಳಿತು, ಕೊಟ್ಟಿದ್ದಾರೆ. ಜೆಡಿಎಸ್ ಕ್ಷೇತ್ರದ ಶಾಸಕರಿಗೆ ಅನುದಾನ ನೀಡದೆ ತೊಂದರೆ ನೀಡುತ್ತಿದೆ. ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ಮಾಡಿದೆ. ಅನುದಾನ ತರಲು ತಮ್ಮ ಬೆಂಬಲ, ಹೋರಾಟ ಸದಾ ಇರಲಿ’ ಎಂದರು.
‘ಉಸ್ತುವಾರಿ ಸಚಿವರಿಗೆ ಕುಮಾರಣ್ಣ ವಿರುದ್ಧ ಟೀಕೆ ಮಾಡದಿದ್ದರೆ ಸಮಾಧಾನವಿಲ್ಲ. ಶಕ್ತಿ ಭಾಗ್ಯ ಹಣ ಕಾಂಗ್ರೆಸ್ ಗೆಲುವಿಗಾಗಿ ವಿವಿಧ ಕ್ಷೇತ್ರದಲ್ಲಿ ಬಳಕೆಯಾಗಿದೆ. ಜನತೆ ರೋಸಿ ಹೋಗಿದ್ದು ತಕ್ಕಪಾಠ ಕಲಿಸುವ ಕಾಲ ಹತ್ತಿರವಾಗುತ್ತಿದೆ’ ಎಂದು ಹೇಳಿದರು.
ಶಾಸಕ ಎಚ್.ಟಿ. ಮಂಜು ಮಾತನಾಡಿ, ‘ಜಿಲ್ಲೆಯ ಏಕೈಕ ಜೆಡಿಎಸ್ ಪಕ್ಷದ ಶಾಸಕ ನಾನಾಗಿದ್ದು, ಅನುದಾನವಿಲ್ಲದೆ ಜನತೆಗೆ ಮುಖ ತೋರಿಸಲು ಕಷ್ಟವಾಗಿದೆ. ಅನುದಾನಕ್ಕಾಗಿ ಜನಬೆಂಬಲದೊಂದಿಗೆ ವಿಧಾನಸೌಧ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ’ ಹೇಳಿದರು.
ಹಾಸನ ಶಾಸಕ ಸ್ವರೂಪ್, ಶ್ರವಣಬೆಳಗೊಳ ಕ್ಷೇತ್ರ ಶಾಸಕ ಸಿ.ಎನ್. ಬಾಲಕೃಷ್ಣ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಕೀರಾಂ, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.