ADVERTISEMENT

ಸಂವಿಧಾನವೇ ತಿದ್ದುಪಡಿಯಾಗಿರುವಾಗ ಬೈಲಾ ತಿದ್ದುಪಡಿಯಲ್ಲಿ ತಪ್ಪೇನಿದೆ?: ಮುದ್ದೇಗೌಡ

ಕಸಾಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:08 IST
Last Updated 16 ಮೇ 2025, 16:08 IST
ಎಚ್‌.ಎಸ್‌.ಮುದ್ದೇಗೌಡ 
ಎಚ್‌.ಎಸ್‌.ಮುದ್ದೇಗೌಡ    

ಮಂಡ್ಯ: ‘ಸಂವಿಧಾನವನ್ನೇ ಹಲವು ಬಾರಿ ತಿದ್ದುಪಡಿ ಮಾಡಿರುವಾಗ ಕಸಾಪ ಬೈಲಾವನ್ನು ಆಯಾ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿರುವುದರಲ್ಲಿ ತಪ್ಪೇನಿದೆ’ ಎಂದು ಕಸಾಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್. ಮುದ್ದೇಗೌಡ ಪ್ರಶ್ನಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಾಹಿತ್ಯ ಪರಿಷತ್ತು ಆರಂಭವಾದ ದಿನದಿಂದಲೂ ಬೈಲಾ ತಿದ್ದುಪಡಿಯಾಗಿದೆ. ಆಡಳಿತದ ಅನುಕೂಲಕ್ಕಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಿದ್ದುಪಡಿ ಮಾಡಲಾಗಿದೆ’ ಎಂದು ಸಮರ್ಥಿಸಿಕೊಂಡರು. 

‘ಸದನದಲ್ಲಿ ಅಶಿಸ್ತು ತೋರಿದರೆ, ಚುನಾಯಿತ ಜನಪ್ರತಿನಿಧಿಗಳನ್ನೇ ವಿಧಾನಸಭೆ ಸ್ಪೀಕರ್‌ ಅವರು ಸದನದಿಂದ ಹೊರಗೆ ಹಾಕುತ್ತಾರೆ. ಅದೇ ರೀತಿ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗದ್ದಲ, ಅಶಿಸ್ತು ತೋರಿದವರ ವಿರುದ್ಧ ಮಹೇಶ ಜೋಶಿ ಅವರು ಶಿಸ್ತುಕ್ರಮ ಕೈಗೊಂಡಿದ್ದಾರೆ. ಪರಿಷತ್ತಿನ ಘನತೆ, ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದು ತಪ್ಪೇ’? ಎಂದರು.  

ADVERTISEMENT

ಕಸಾಪ ಮತ್ತು ಮಹೇಶ ಜೋಶಿ ಅವರ ಬಗೆಗಿನ ಅಪಸ್ವರಕ್ಕೆ ಅಂತ್ಯ ಹಾಡಲು ಈ ಪತ್ರಿಕಾಗೋಷ್ಠಿಗೆ ಬಂದಿದ್ದೇನೆ. ಈ ಮುಸುಕಿನ ಗುದ್ದಾಟ ನಿಲ್ಲಬೇಕಿದೆ. ತಾತ್ವಿಕ ನೆಲೆಯಲ್ಲಿ ಟೀಕಿಸಿದರೆ ನಮ್ಮ ಆಕ್ಷೇಪವಿಲ್ಲ. ಆದರೆ, ವ್ಯಕ್ತಿಗತವಾಗಿ ಟೀಕಿಸಿದರೆ ಸಹಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಮ್ಮೇಳನ ಆರಂಭದಿಂದ ಇಲ್ಲಿಯವರೆಗೂ ನಡೆದ ಚರ್ಚೆಗಳು ಹಾದಿ ತಪ್ಪಿವೆ. ಜೋಶಿಯವರನ್ನು ಭ್ರಷ್ಟರು ಅಂದರೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾವೆಲ್ಲರೂ ಅದರ ಪಾಲುದಾರರು ಎಂಬಂತಾಗುವುದಿಲ್ಲವೇ? ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. 

ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಿಗದಿಯಾದಾಗಿನಿಂದಲೂ ಇಲ್ಲಿನ ಸ್ಥಾಪಿತ ಶಕ್ತಿಗಳು ಮಹೇಶ ಜೋಶಿ ಅವರನ್ನು ಸಹಿಸಲಿಲ್ಲ. ವೈಯಕ್ತಿಕ ಅಹಂನಿಂದ ಅವರ ಕೆಲಸ ಕಾರ್ಯಗಳನ್ನು ವಿರೋಧಿಸುತ್ತಲೇ ಬಂದರು. ಸಮ್ಮೇಳನದ ಜಾಗದ ವಿಚಾರದಲ್ಲೂ ಕೊಂಕು ಮಾತನ್ನಾಡಿದರು. ಮಂಡ್ಯಕ್ಕೆ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಿಗುವಲ್ಲಿ ಮಹೇಶ ಜೋಶಿಯವರ ಪಾತ್ರ ದೊಡ್ಡದಿದೆ ಎಂದು ಹೇಳಿದರು. 

ಸಮ್ಮೇಳನದ ಎರಡನೇ ದಿನ ಮುಂದಿನ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಕಾರ್ಯಕಾರಿ ಸಮಿತಿ ಸಭೆ ನಡೆಯುವುದು ವಾಡಿಕೆ. ಅದರಂತೆ ಮಂಡ್ಯದಲ್ಲಿ ನಡೆದ ಸಭೆಗೆ ಬಂದ ಮೀರಾ ಶಿವಲಿಂಗಯ್ಯ ಅವರನ್ನು ಸದಸ್ಯರಲ್ಲದ ಕಾರಣಕ್ಕೆ ಹೊರಗಡೆ ಕಳುಹಿಸಲಾಗಿದೆ. ಇದಕ್ಕೆ ಕೆಲವರು ಗುಂಪು ಕಟ್ಟಿಕೊಂಡು ಜೋಶಿಗೆ ಜೀವಭಯ ಒಡ್ಡುವ ರೀತಿಯಲ್ಲಿ ವರ್ತಿಸಿದರು ಎಂದು ಆರೋಪಿಸಿದರು. 

ಮೀರಾ ಶಿವಲಿಂಗಯ್ಯ ಅವರನ್ನು ಸಮ್ಮೇಳನದ ಸಂಚಾಲಕಿಯನ್ನಾಗಿ ನೇಮಿಸಲಾಗಿತ್ತು. ಸಮ್ಮೇಳನ ಮುಗಿದ ನಂತರ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ. ‘ನನ್ನನ್ನು ಸಂಚಾಲಕಿಯನ್ನಾಗಿ ಮಾಡಿದ್ದು ಸಚಿವರು, ಜಿಲ್ಲಾಧಿಕಾರಿಯೇ ಹೊರತು ಕಸಾಪ ಅಧ್ಯಕ್ಷರಲ್ಲ’ ಎಂಬ ಮಾತುಗಳನ್ನು ಆಡುವ ಮೂಲಕ ಜೋಶಿ ಅವರೊಂದಿಗೆ ಜಟಾಪಟಿ ಮಾಡಿದ್ದು ಸರಿಯಲ್ಲ ಎಂದರು. 

ಚುಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ವಿ. ನಾಗರಾಜು, ಮುಖಂಡರಾದ ಸುಜಾತಾ ಕೃಷ್ಣ, ಧನಂಜಯ ದರಸಗುಪ್ಪೆ, ಅಪ್ಪಾಜಪ್ಪ, ಕರವೇ ಮುಖಂಡರಾದ ಕೆ.ಟಿ. ಶಂಕರೇಗೌಡ, ವೇಣು, ಶ್ರೀನಿವಾಸ್ ಗೋಷ್ಠಿಯಲ್ಲಿದ್ದರು.

‘ಆರು ತಿಂಗಳೊಳಗೆ ಲೆಕ್ಕಪತ್ರ’

ಪರಿಷತ್ತಿನ ನಿಯಮಗಳ ಪ್ರಕಾರ ಸಮ್ಮೇಳನ ನಡೆದ ಆರು ತಿಂಗಳೊಳಗೆ ಲೆಕ್ಕಪತ್ರ ನೀಡಬೇಕು. ಇನ್ನೂ ಕಾಲಾವಕಾಶ ಇದೆ. ಸರ್ಕಾರದಿಂದ ಬಂದ ಹಣ ಸಂಘ ಸಂಸ್ಥೆಗಳು ಖಾಸಗಿಯಾಗಿ ಬಂದಿರುವ ಹಣದ ಬಗ್ಗೆ ಲೆಕ್ಕ ಕೊಡುವುದು ಅಗತ್ಯ. ಜಿಲ್ಲಾಡಳಿತ ಜೋಶಿ ಅವರಿಗೆ ₹2.50 ಕೋಟಿ ನೀಡಿದೆ. ಅದರಲ್ಲಿ ವಿಶೇಷ ಆಹ್ವಾನಿತರಿಗೆ ಗೌರವ ಸಂಭಾವನೆ ಸೇರಿದಂತೆ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಖರ್ಚುಗಳನ್ನು ಸರಿದೂಗಿಸಬೇಕಿದೆ. ಚೆಕ್ ಮೂಲಕ ವ್ಯವಹಾರ ಮಾಡಬೇಕು. ಇನ್ನೂ ಕೆಲವು ಚೆಕ್‌ಗಳನ್ನು ಕಳುಹಿಸುವುದು ಬಾಕಿ ಇದೆ. ಜೂನ್ 23ರೊಳಗೆ ಅದಕ್ಕೆ ಸಂಬಂಧಿಸಿದಂತೆ ಲೆಕ್ಕ ನೀಡುತ್ತಾರೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ’ ಎಂದು ಎಚ್.ಎಸ್. ಮುದ್ದೇಗೌಡ ಹೇಳಿದರು. 

‘ಹೋರಾಟ ಸಮಿತಿಯ ಹೆಸರು ಬದಲಾವಣೆ’

‘ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ವತಿಯಿಂದ ನಾಳೆ ಮಹೇಶ್ ಜೋಶಿ ಅವರ ವಿರುದ್ಧ ಜಾಗೃತಿ ಸಮಾವೇಶ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಈ ಮೊದಲು ಸಮಾನ ಮನಸ್ಕರ ವೇದಿಕೆಯಡಿ ಸಮಾವೇಶ ಮಾಡಲು ಮುಂದಾಗಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ ನಂತರ ಹೆಸರನ್ನು ಬದಲಿಸಿದ್ದಾರೆ. ಇದಕ್ಕೆ ಅಧ್ಯಕ್ಷರು ಪದಾಧಿಕಾರಿಗಳು ಯಾರೂ ಇಲ್ಲ’ ಎಂದು ಎಚ್.ಎಸ್. ಮುದ್ದೇಗೌಡ ಟೀಕಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.