ADVERTISEMENT

ಬಿಜೆಪಿಗೆ ಕೆ.ಸಿ.ನಾರಾಯಣಗೌಡ ಸೇರ್ಪಡೆ

ಅನುದಾನ ನೀಡಿರುವ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಸವಾಲು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 14:14 IST
Last Updated 16 ನವೆಂಬರ್ 2019, 14:14 IST
ಕೆ.ಆರ್.ಪೇಟೆ ಪಟ್ಟಣದ ಬಿಜೆಪಿ ತಾಲ್ಲೂಕು ಘಟಕದ ಕಚೇರಿಯಲ್ಲಿ ಕೆ.ಸಿ.ನಾರಾಯಣಗೌಡ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು ಇತರರು ಇದ್ದಾರೆ
ಕೆ.ಆರ್.ಪೇಟೆ ಪಟ್ಟಣದ ಬಿಜೆಪಿ ತಾಲ್ಲೂಕು ಘಟಕದ ಕಚೇರಿಯಲ್ಲಿ ಕೆ.ಸಿ.ನಾರಾಯಣಗೌಡ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು ಇತರರು ಇದ್ದಾರೆ   

ಕೆ.ಆರ್.ಪೇಟೆ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ನನ್ನನ್ನು ಬೆಂಬಲಿಸಿದ್ದರಿಂದ ಸುಲಭವಾಗಿ ಗೆಲ್ಲಲು ಸಾಧ್ಯವಾಯಿತು’ ಎಂದು ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹೇಳಿದರು.

ಪಟ್ಟಣದ ಬಿಜೆಪಿ ತಾಲ್ಲೂಕು ಘಟಕದ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರು ಮಾತನಾಡಿದರು.

‘ನಾನು ಬಿಎಸ್‌ಪಿಯಿಂದ ರಾಜಕೀಯ ಜೀವನವನ್ನು ಆರಂಭಿಸಿದೆ. ಬಿಜೆಪಿ ಸೇರುವಂತೆ ಆಗಲೇ ನನ್ನನ್ನು ಆಹ್ವಾನಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬೂಕಹಳ್ಳಿ ಮಂಜು ಅವರ ತಂದೆಯೇ ನನ್ನನ್ನು ಆಶೀರ್ವದಿಸಿದ್ದರು. ಈಗ ಕಾಲ ಕೂಡಿ ಬಂದಿದೆ‌’ ಎಂದರು.

ADVERTISEMENT

‘ಪಟ್ಟಣಕ್ಕೆ ಗುರುವಾರ ಬಂದಿದ್ದ ಎಚ್‌.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರು ದೊಡ್ಡವರು. ಆ ಬಗ್ಗೆ ಪ್ರತಿಕ್ರಿಯಿ ಸುವುದಿಲ್ಲ. ಅನುದಾನ ನೀಡಿರುವ ಬಗ್ಗೆ ಈಗಲೂ ಬಹಿರಂಗ ಚರ್ಚೆಗೆ ನಾನು ಸಿದ್ಧ. ದಾಖಲೆಗಳ ಪರಿಶೀಲನೆಯಾಗಲಿ’ ಎಂದು ಸವಾಲು ಹಾಕಿದರು.

ಇದೇ ವೇಳೆ, ಕುರುಬ ಸಮಾಜದ ಯುವ ಘಟಕದ ಅಧ್ಯಕ್ಷ ಎಂ.ಹೊಸೂರು ನಿಂಗೇಗೌಡ, ಅವಿನಾಶ್, ಅಕ್ಷಯ್, ಶ್ರೀನಿವಾಸ್, ಚಂದೂ, ಕುಮಾರ್, ಜಗದೀಶ್, ಎನ್.ಡಿ.ರಾಮೇಗೌಡ ಬಿಜೆಪಿಗೆ ಸೇರ್ಪಡೆಯಾದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು, ಕರ್ತೇನಹಳ್ಳಿ ಸರೇಶ್, ಹಿರಿಕಳಲೆ ಸುರೇಶ್, ಪ್ರೆಸ್ ಕುಮಾರಸ್ವಾಮಿ ಇದ್ದರು.

18ಕ್ಕೆ 3 ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕೆ.ಆರ್.ಪೇಟೆ: ವಿಧಾನಸಭಾ ಉಪ ಚುನಾವಣೆಯ ಕುತೂಹಲದ ಕಣವಾಗಿರುವ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಸಲಿದ್ದಾರೆ.

ನ.18ರಂದು ಬೆಳಿಗ್ಗೆ 11.30ಕ್ಕೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನಾಮಪತ್ರ ಸಲ್ಲಿಸಲಿದ್ದಾರೆ.

‘ಬಿ’ ಫಾರಂಗೆ ಪೂಜೆ ಸಲ್ಲಿಕೆ

ಸಂತೇಬಾಚಹಳ್ಳಿ: ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿರುವ ನಾರಾಯಣಗೌಡ ಅವರು ಪಕ್ಷದ ‘ಬಿ’ ಫಾರಂಗೆ ತಮ್ಮ ಹುಟ್ಟೂರಾದ ಕೈಗೋನಹಳ್ಳಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ, ಮಾತನಾಡಿದ ಅವರು, ‘ಕ್ಷೇತ್ರದ ಮತದಾರರು ನನಗೆ ಮತ ನೀಡಬೇಕು. ಮತ್ತೊಮ್ಮೆ ನಿಮ್ಮ ಸೇವಕನಾಗಿ ಸೇವೆ ಮಾಡಲು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

‘ನ.18ರಂದು ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ. ಈ ವೇಳೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ, ಶಾಸಕ ಪ್ರೀತಂಗೌಡ, ಬಿ.ವೈ.ವಿಜಯೇಂದ್ರ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.