ADVERTISEMENT

ಸಿದ್ದರಾಮಯ್ಯ ಅಗ್ರೆಸಿವ್‌ ನಾಯಕ: ಚಲುವರಾಯಸ್ವಾಮಿ

‘ಉಗ್ರರ ದಾಳಿ: ಮೃತರ ಕುಟುಂಬಸ್ಥರಿಗೆ ಕೇಂದ್ರ ಉದ್ಯೋಗ ನೀಡಲಿ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 13:01 IST
Last Updated 30 ಏಪ್ರಿಲ್ 2025, 13:01 IST
ಎನ್‌.ಚಲುವರಾಯ ಸ್ವಾಮಿ 
ಎನ್‌.ಚಲುವರಾಯ ಸ್ವಾಮಿ    

ಮಂಡ್ಯ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಅಗ್ರೆಸಿವ್‌ ನಾಯಕ. ಉದ್ದೇಶಪೂರ್ವಕವಾಗಿ ಒಬ್ಬ ಅಧಿಕಾರಿ ಮೇಲೆ ಕೈ ಎತ್ತಿಲ್ಲ. ನ್ಯೂನತೆ ಕಾರಣಕ್ಕಾಗಿ ಸಿಟ್ಟಾಗಿದ್ದರು. ಸಿದ್ದರಾಮಯ್ಯ ವಿರುದ್ಧ ಯಾವುದೇ ತಪ್ಪು ಹುಡುಕಲು ಸಾಧ್ಯವಿಲ್ಲದೆ ಹೀಗೆ ಮಾಡುತ್ತಾರೆ. ಬಿಜೆಪಿಯವರು ರಾಜಕೀಯ ಜೀವನ ನಡೆಸಲು ಏನಾದರೂ ಈ ರೀತಿಯ ವಿವಾದ ಸೃಷ್ಟಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಸಿಎಂ ನಡೆಯನ್ನು ಸಮರ್ಥಿಸಿಕೊಂಡರು. 

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಏನು ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ. ಒಬ್ಬರ ಪ್ರಾಣವೂ ಒಂದೇ, ಸಾವಿರಾರು ಜನರ ಪ್ರಾಣಾನೂ ಒಂದೇ. ಪರಿಹಾರದ ಜತೆಗೆ ಕೇಂದ್ರ ಸರ್ಕಾರ ಮೃತರ ಕುಟುಂಬಸ್ಥರಿಗೆ ಉದ್ಯೋಗ ನೀಡಲಿ. ಇನ್ನು ಮುಂದೆ ಯಾವುದೇ ದಾಳಿಯಾಗದಂತೆ ಎಚ್ಚರಿಕೆ ವಹಿಸಲಿ. ಈ ನಿಟ್ಟಿನಲ್ಲಿ ಏನೇ ನಿರ್ಧಾರ ಮಾಡಿದರೂ ಬೆಂಬಲಿಸುತ್ತೇವೆ. ಆದರೆ ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿ ಸಂಸ್ಕೃತಿ. ಸಾವು, ನೋವಲ್ಲಿ ರಾಜಕಾರಣ ನಮಗಿಷ್ಟವಿಲ್ಲ’ ಎಂದರು.

‘ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ಅನುಮೋದನೆ ಸಿಕ್ಕಿದೆ. ಆದರೆ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರು ಕೃಷಿ ವಿವಿ ಪ್ರಾರಂಭಕ್ಕೆ ನೇರವಾಗಿ ವಿರೋಧ ಮಾಡಲಾಗದೆ ಎಚ್.ಡಿ.ರೇವಣ್ಣ ಅವರನ್ನು ಮುಂದೆ ಬಿಟ್ಟಿದ್ದರು. ಎಚ್.ಡಿ.ರೇವಣ್ಣ ಪ್ರತಿಭಟನೆ ಮಾಡಿ ಅಧಿವೇಶನದಲ್ಲೂ ವಿರೋಧ ಮಾಡಿದ್ದರು. ಮಂಡ್ಯ ಜಿಲ್ಲೆ ಮೇಲೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರಿಗೆ ಏನೋ ಒಂದು ದ್ವೇಷ. ಯಾರಾದರೂ ದ್ವೇಷ ಮಾಡಲಿ, ನಾನು ಅಭಿವೃದ್ಧಿ ಪರ. ಕೃಷಿ ವಿವಿ ಸ್ಥಾಪನೆಗೆ ಕೈಮುಗಿದು ಮನವಿ ಮಾಡಿದ್ದೆ’ ಎಂದು ಹೇಳಿದರು. 

ADVERTISEMENT

ಸಹಕಾರ ಚುನಾವಣೆಗೆ ಸಚ್ಚಿನ್ ಚಲುವರಾಯಸ್ವಾಮಿ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ‘ಸಚ್ಚಿನ್‌ನ ಮುಂದಿನ ರಾಜಕಾರಣದ ಬಗ್ಗೆ ನಾನು ಇವತ್ತು ಹೇಳಲು ಆಗಲ್ಲ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಚ್ಚಿನ್ ಆಯ್ಕೆ ಸ್ಥಳೀಯರ ತೀರ್ಮಾನ. ಅವನ ಮುಂದಿನ ರಾಜಕೀಯ ಬೆಳವಣಿಗೆ ಅಂದಿನ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.