ಶ್ರೀರಂಗಪಟ್ಟಣ: ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯಿಂದ ಯಾವುದೇ ಜಾತಿ, ಧರ್ಮ, ಪಂಗಡಗಳಿಗೆ ಅನ್ಯಾಯವಾಗುವುದಿಲ್ಲ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಈ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿವೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಟೀಕಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ದಾದಿಯರ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಈಗ ಮಂಡಿಸಿರುವ ಗಣತಿಯ ವರದಿ 10 ವರ್ಷಗಳ ಹಿಂದೆ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿದೆ. ಈ ಅವಧಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಹಾಗಾಗಿ ಪ್ರತ್ಯೇಕ ಸಮಿತಿ ರಚಿಸಿ ಮತ್ತೆ ದತ್ತಾಂಶ ಸಂಗ್ರಹಿಸುವ ಅಗತ್ಯವಿದ್ದು, ಒಕ್ಕಲಿಗರು, ವೀರಶೈವರು, ಬ್ರಾಹ್ಮಣರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಯಾರಿಗೂ ಅನ್ಯಾಯವಾಗದಂತೆ ನೈಜ ವರದಿ ಬರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪರಿಪಾಲನೆಗೆ ಒತ್ತು ನೀಡುತ್ತಿದೆ. ಹಿಂದುಳಿದ ಮತ್ತು ಶೋಷಿತರ ಕಲ್ಯಾಣದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಸರ್ಕಾರ ಕಟಿಬದ್ಧವಾಗಿದೆ. ವಿರೋಧ ಪಕ್ಷಗಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಜನ ಸಾಮಾನ್ಯರು ವಾಸ್ತವಾಂಶ ತಿಳಿಯಬೇಕು. ಜನರಲ್ಲಿ ಉಂಟಾಗಿರುವ ಗೊಂದಲ ಪರಿಹಾರ ಸಂಬಂಧ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಜತೆ ಸಚಿವರು ಮತ್ತು ಶಾಸಕರು ಚರ್ಚಿಸಿದ್ದಾರೆ’ ಎಂದು ಹೇಳಿದರು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್, ಸದಸ್ಯರಾದ ಎಸ್.ಎನ್. ದಯಾನಂದ್, ಪದ್ಮಮ್ಮ, ಕೃಷ್ಣಪ್ಪ, ನರಸಿಂಹೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ಡಿಎಚ್‌ಒ ಡಾ.ಮೋಹನ್ ಇದ್ದರು.
ಚಿಕ್ಕ ಅಂಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಗಿರೀಶ್, ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ನಿಂಗೇಗೌಡ, ಮುಖಂಡ ಅಭಿಷೇಕ್, ಲೋಕೋಪಯೋಗಿ ಎಇಇ ಜಸ್ವಂತ್, ಸೆಸ್ಕ್ ಎಇಇ ಮಂಜುನಾಥ ಪ್ರಸಾದ್, ಗ್ರಾ.ಪಂ. ಅಧ್ಯಕ್ಷೆ ಚನ್ನಮ್ಮ, ಪಿಡಿಒ ದೇವೇಗೌಡ, ಕಾರ್ಯದರ್ಶಿ ಮನೋಹರ್, ಸದಸ್ಯರಾದ ಸುನೀತಾ ಕೃಷ್ಣ, ರಜಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.