ADVERTISEMENT

ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಮಾಡಿ: ಬಿ.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 12:54 IST
Last Updated 16 ಜೂನ್ 2025, 12:54 IST
<div class="paragraphs"><p>ಬಿ.ಮಂಜುನಾಥ್‌</p></div>

ಬಿ.ಮಂಜುನಾಥ್‌

   

ಮಂಡ್ಯ: ಜಿಲ್ಲಾಡಳಿತವು ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವುದು ಶ್ಲಾಘನೀಯವಾಗಿದೆ. ಜೀವನಾಡಿಯಾಗಿರುವ ಕಾವೇರಿ ಮಾತೆಗೆ ಕೃತಜ್ಞತೆ ಸಲ್ಲಿಸುವ ಕಾರ್ಯ ಇದಾಗಿದ್ದು, ಇದನ್ನು ವಿರೋಧಿಸುವುದು ಬೇಡ ಎಂದು ಬಜರಂಗಸೇನೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಮಂಜುನಾಥ್‌ ಹೇಳಿದರು.

‘ಕೆಆರ್‌ಎಸ್‌ ಅಣೆಕಟ್ಟೆ ಬಳಿ ಕಾವೇರಿ ಆರತಿ ಮಾಡುವುದಕ್ಕೆ ನಮ್ಮದೂ ವಿರೋಧವಿದೆ, ಆದರೆ ಅದನ್ನು ಶ್ರೀರಂಗಪಟ್ಟಣದ ಗೋಸಾಯ್‌ ಘಾಟ್‌ ಸಮೀಪ ಮಾಡುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ADVERTISEMENT

‘ಕಾವೇರಿ ಆರತಿ ಮಾಡುವ ಹಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಿ ಎನ್ನುವ ಮೂಲಕ ವಿರೋಧ ಮಾಡುವುದು ಸರಿಯಲ್ಲ, ಇದನ್ನು ಮಾಡಿಕೊಳ್ಳಲಿ, ಜೊತೆಗೆ ನಮ್ಮ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರದ ರೀತಿಯಲ್ಲಿ ನಡೆದುಕೊಳ್ಳಲಿ. ಕಾವೇರಿ ಆರತಿ ಎಂಬುವುದು ಕೇವಲ ಬ್ರಾಹ್ಮಣರಿಗೆ ಅಲ್ಲ ಎನ್ನುವುದನ್ನು ವಿರೋಧ ಮಾಡುವವರು ತಿಳಿದುಕೊಳ್ಳಬೇಕು’ ಎಂದರು.

‘ಕಾಶಿಯಲ್ಲಿ ಪ್ರತಿ ವರ್ಷ ಗಂಗಾ ಆರತಿ ಮಾಡುವುದರಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ಬರೋಬ್ಬರಿ ₹200 ಕೋಟಿ ಆದಾಯ ಬರುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಆರತಿ ಮಾಡುವುದರಿಂದ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ. ಅಮ್ಯೂಸ್‌ಮೆಂಟ್‌ ಪಾರ್ಕ್‌ನ್ನು ವಿರೋಧಿಸುತ್ತೇವೆ. ಜೊತೆಗೆ ಕಾವೇರಿ ಆರತಿ ಮಾಡಿ ಎನ್ನುವ ಒತ್ತಾಯ ಮಾಡುತ್ತೇವೆ, ಜಿಲ್ಲಾಡಳಿತಕ್ಕೆ ಬೆಂಬಲ ನೀಡುತ್ತೇವೆ’ ಎಂದು ತಿಳಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್‌. ಹರ್ಷ, ನಗರ ಘಟಕ ಅಧ್ಯಕ್ಷ ಆರ್‌.ಚೇತನ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್‌ಕುಮಾರ್, ಮುಖಂಡರಾದ ಶಿವು, ವಿ.ಶೇಷಾದ್ರಿ, ಸ್ನೇಕ್‌ ಮಹೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.