ADVERTISEMENT

ಭರಚುಕ್ಕಿಯಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ

ಬಿಜೆಪಿ ಕಾರ್ಯಕರ್ತರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 12:57 IST
Last Updated 19 ಜೂನ್ 2025, 12:57 IST
ಕೆಆರ್‌ಎಸ್‌ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಯನ್ನು ಭರಚುಕ್ಕಿಯಲ್ಲಿ ಹಾಗೂ ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ಕಾವೇರಿ ಹೊಳೆ ಬಳಿ ನಡೆಸಬೇಕೆಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಕೆಆರ್‌ಎಸ್‌ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಯನ್ನು ಭರಚುಕ್ಕಿಯಲ್ಲಿ ಹಾಗೂ ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ಕಾವೇರಿ ಹೊಳೆ ಬಳಿ ನಡೆಸಬೇಕೆಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಯನ್ನು ಭರಚುಕ್ಕಿಯಲ್ಲಿ ಹಾಗೂ ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ಕಾವೇರಿ ಹೊಳೆ ಬಳಿ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

‘ಜಿಲ್ಲೆಯ ಜೀವನಾಡಿಯಾಗಿರುವ ಕೆಆರ್‌ಎಸ್‌ ಅಣೆಕಟ್ಟೆಯು ಹಳೆಯ ಹಾಗೂ ಇತಿಹಾಸ ಪ್ರಸಿದ್ಧಿಯಾಗಿದೆ. ಇದನ್ನು ಚುರ್ಕಿ ಗಾರೆಯಿಂದ ಮತ್ತು ಏಕಶಿಲಾ ಪದರದ ಮೇಲೆ ಕಟ್ಟಲಾಗಿರುವ ಅಣೆಕಟ್ಟೆಯ ಪ್ರದೇಶದಲ್ಲಿ ಅಮ್ಯೂಸ್‌ಮೆಮಟ್‌ ಪಾರ್ಕ್‌ ಬಳಿ ಧಕ್ಕೆ ತರಲು ಹೊರಟಿರುವ ಕ್ರಮ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ವಾರಾಣಸಿಯಲ್ಲಿ ನಡೆಯುವ ಗಂಗಾರತಿ ಮಾದಿಯಲ್ಲಿ ಕರ್ನಾಟಕದ ಕಾವೇರಿ ನದಿ ತೀರದಲ್ಲೂ ಕಾವೇರಿ ಆರತಿ ಮಾದರಿಯಲ್ಲಿ ಮಾಡಲು ಹೊರಟಿರುವ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕನ್ನಂಬಾಡಿ ಕಟ್ಟೆ ಬಳಿ ಯೋಜನೆ ಮಾಡುವುದು ಸರಿಯಲ್ಲ. ಕಾವೇರಿ ಆರತಿಗೆ ₹100 ಅಲ್ಲ ₹200 ಕೋಟಿಯನ್ನೇ ಖರ್ಚು ಮಾಡಿ ಕಾವೇರಿ ಮಾತೆಯನ್ನು ಸ್ಮರಿಸಲಿ, ಕೆಆರ್‌ಎಸ್‌ ಬಳಿ ಬಿಟ್ಟು, ಶ್ರೀರಂಗಪಟ್ಟಣದ ದೇವಾಲಯದ ಸಮೀಪದ ಸ್ನಾನ ಘಟ್ಟದಲ್ಲಿ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಅಣೆಕಟ್ಟೆ ಸಮೀಪದ ಬೃಂದಾವನ ಉದ್ಯಾನ ಮತ್ತು ತೋಟಗಾರಿಕೆ ಜಾಗ ‘ಅರಣ್ಯ ಪ್ರದೇಶ’ ಎಂದು 1978ರಲ್ಲಿ ನೊಟಿಫಿಕೇಷನ್‌ ಆಗಿದೆ. ಅಣೆಕಟ್ಟೆಗೆ ಒಂದು ಕಿ.ಮೀ. ದೂರದಲ್ಲಿರುವ ದೇವರಾಜ ಪಕ್ಷಿಧಾಮದಲ್ಲಿ ನೀರುನಾಯಿ ಮತ್ತು ವಲಸೆ ಪಕ್ಷಿಗಳಿವೆ 3 ಕಿ.ಮೀ. ದೂರದಲ್ಲಿ ರಂಗನತಿಟ್ಟು ಮತ್ತು ಕಾವೇರಿ ನದಿ ತೀರದಲ್ಲಿ ಗೆಂಡೆಹೊಸಹಳ್ಳಿ ಪಕ್ಷಿಧಾಮವಿದೆ. ಪಕ್ಷಿ ಸಂಕುಲಕ್ಕೆ ಯೋಜನೆಯಿಂದ ತೊಂದರೆಯಾಗುತ್ತದೆ’ ಎಂದು ಆರೋಪಿಸಿದರು.

ರೈತರ ವಿರೋಧ ಕಟ್ಟಿಕೊಂಡು ಬೊಟಾನಿಕಲ್‌ ಉದ್ಯಾನ, ಜಂಗಲ್‌ ಬೋಟ್‌ ರೈಡ್‌, ಮೀನಾ ಬಜಾರ್‌, ಡಾಲ್‌ ಮ್ಯೂಸಿಯಂ, ಫೂಡ್‌ ಫಾಜಾ, ವಾಟರ್‌ ಪಾರ್ಕ್‌, ಲೇಸರ್‌ ಫೌಂಟೇನ್‌ ಶೋ, ಹೆಲಿಪ್ಯಾಡ್‌, ಜೈಹೋ ಫೌಂಟೇನ್‌ ಸೇರಿದಂತೆ ಹಲವು ಪ್ರವಾಸಿ ಕಾಮಗಾರಿಗಳನ್ನು ಮಾಡಲು ಹೊರಟಿರುವ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್‌, ಮುಖಂಡರಾದ ಎಸ್‌.ಆರ್‌.ಭೀಮೇಶ್‌, ಪ್ರಸನ್ನಕುಮಾರ್, ಕೆಂಪಾಚಾರಿ, ಚಂದ್ರಪ್ಪ, ಶಿವಲಿಂಗಪ್ಪ, ಎಸ್‌.ಸಿ.ಯೋಗೇಶ್‌, ಧನಂಜಯ ಪಾಂಡವಪುರ, ಶಿವಣ್ಣ ಗೊರವಾಲಿ ಭಾಗವಹಿಸಿದ್ದರು.

ಗುಂಡಿಗಳನ್ನು ತೋಡಿದರೆ ಅಪಾಯ 

‘ಅಮ್ಯೂಸ್‌ಮೆಂಟ್‌ ಪಾರ್ಕ್‌ಗಾಗಿ ಆಳವಾದ ದೊಡ್ಡ ಗುಂಡಿಗಳನ್ನು ತೋಡಿದರೆ ಶಿಲಾ ಪದರದ ಮೇಲೆ ನಿಂತಿರುವ ಕೆಆರ್‌ಎಸ್‌ ಅಣೆಕಟ್ಟೆ ಕಂಪಿಸಿದರೆ ಅನಾಹುತ ಕಟ್ಟಿಟ್ಟಬುತ್ತಿ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಣೆಕಟ್ಟು ಸುರಕ್ಷತಾ ಕಾಯ್ದೆಯ 2021ರ ಪ್ರಕಾರ ಅಣೆಕಟ್ಟೆಯ 20 ಕಿ.ಮೀ.ಸುತ್ತ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ. ಬೇರೆ ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಅಣೆಕಟ್ಟೆಯ ಸ್ವರೂಪವನ್ನು ಬದಲಿಸುವಂತಿಲ್ಲ. ಆದರೂ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದು ಕಾಯ್ದೆಯ ವಿರುದ್ಧವಾಗಿದೆ’ ಎಂದು ಮುಖಂಡರು ಆತಂಕಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.