ADVERTISEMENT

ಮಿಮ್ಸ್‌ ಆವರಣದಲ್ಲಿ ಚೆಲ್ಲಾಡುತ್ತಿದ್ದ ಪಿಪಿಇ ಕಿಟ್‌: ಆತಂಕ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 15:41 IST
Last Updated 22 ಜೂನ್ 2020, 15:41 IST
ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಚೆಲ್ಲಾಡುತ್ತಿರುವ ಪಿ‍ಪಿಇ ಕಿಟ್‌, ಮುಖಗವಸು, ಕೈಗವಸುಗಳು
ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಚೆಲ್ಲಾಡುತ್ತಿರುವ ಪಿ‍ಪಿಇ ಕಿಟ್‌, ಮುಖಗವಸು, ಕೈಗವಸುಗಳು   

ಮಂಡ್ಯ: ಕೋವಿಡ್‌–19 ವಾರ್ಡ್‌ನಲ್ಲಿ ಸಿಬ್ಬಂದಿ ಬಳಸಿದ ವೈಯಕ್ತಿಕ ಸುರಕ್ಷತಾ ಉಪಕರಣಗಳ (ಪಿಪಿಇ) ಕಿಟ್‌, ಮಾಸ್ಕ್‌ ಹಾಗೂ ಇತರ ಸಾಮಗ್ರಿಗಳು ಇಲ್ಲಿನ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆವರಣದಲ್ಲಿ ಚೆಲ್ಲಾಡುತ್ತಿರುವುದು ಸೋಮವಾರ ಪತ್ತೆಯಾಗಿ ಆಸ್ಪತ್ರೆ ಬಳಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಸರ್ಕಾರದ ಕಾರ್ಯಸೂಚಿಯಂತೆ ಜೈವಿಕ ವೈದ್ಯಕೀಯ ತ್ಯಾಜ್ಯದ ಮಾದರಿಯಲ್ಲಿ ಪಿಪಿಇ ಕಿಟ್‌ ಹಾಗೂ ಇತರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಶವಾಗಾರದ ಬಳಿ ಇಡಲಾಗಿದ್ದ ತಾಜ್ಯ ಸಂಗ್ರಹ ಡಬ್ಬಿಗಳು ತುಂಬಿ ಪಿಪಿಇ ಕಿಟ್‌, ಮುಖಗವಸು, ಕೈಗವಲು, ಕನ್ನಡಕಗಳು ಕೆಳಕ್ಕೆ ಬಿದ್ದಿದ್ದವು.

ಸಮೀಪದಲ್ಲೇ ಕೋವಿಡ್‌ ವಾರ್ಡ್‌ ಇದ್ದು ಅಲ್ಲಿಯ ವೈದ್ಯರು ಹಾಗೂ ಇತರ ಸಿಬ್ಬಂದಿ ಬಳಸಿದ ಉಪಕರಣಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ ಎಂಬ ಸುದ್ದಿ ಹರಡಿತು. ಆಸ್ಪತ್ರೆಗೆ ಬಂದಿದ್ದ ಇತರ ರೋಗಿಗಳು, ಅವರ ಸಂಬಂಧಿಕರು ಆತಂಕಗೊಂಡು ಮಿಮ್ಸ್‌ ವೈದ್ಯಕೀಯ ಅಧೀಕ್ಷಕರ ಕಚೇರಿಗೆ ವಿಷಯ ತಿಳಿಸಿದರು.

ADVERTISEMENT

ವಿಷಯ ತಿಳಿಸಿ ಹಲವು ಗಂಟೆಗಳು ಕಳೆದರೂ ಸಿಬ್ಬಂದಿ ತ್ಯಾಜ್ಯ ತೆರವು ಮಾಡಲಿಲ್ಲ. ಜನರು ಮೊಬೈಲ್‌ಗಳಲ್ಲಿ ಚಿತ್ರ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಆವರಣವನ್ನು ಸ್ವಚ್ಛಗೊಳಿಸಿದರು.

‘ರೋಗಿಗಳನ್ನು ಕರೆತಂದ ಆಂಬುಲೆನ್ಸ್‌ ಸಿಬ್ಬಂದಿ ಕೋವಿಡ್‌ ವಾರ್ಡ್‌ ಸಮೀಪದಲ್ಲೇ ಪಿಪಿಇ ಕಿಟ್‌ ಕಳಚಿ ಬಿಸಾಡಿ ಹೋಗಿದ್ದರು. ವಿಷಯ ತಿಳಿದ ಕೂಡಲೇ ಎಲ್ಲವನ್ನು ತೆರವು ಮಾಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಮುಂದೆ ಈ ರೀತಿ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಮಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಹೇಳಿದರು.

ಸ್ಥಳಾಂತರಗೊಳ್ಳದ ಆಸ್ಪತ್ರೆ: ‘ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆಗಳನ್ನು ಇತರ ಕಟ್ಟಡಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಮಂಡ್ಯ ಜಿಲ್ಲಾಸ್ಪತ್ರೆಯ ಯಾವ ವಿಭಾಗವನ್ನೂ ಸ್ಥಳಾಂತರ ಮಾಡಿಲ್ಲ. ಹೀಗಾಗಿ ಜನರು ಆತಂಕದಿಂದ ಮಿಮ್ಸ್‌ ಆವರಣಕ್ಕೆ ಬರುವಂತಾಗಿದೆ. ಅಲ್ಲದೆ ಕೋವಿಡ್‌ ವಾರ್ಡ್‌ನಲ್ಲಿ ಬಳಸಿದ ವಸ್ತುಗಳು ಚೆಲ್ಲಾಡುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ’ ಎಂದು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.