ADVERTISEMENT

ಸಿಎಎ, ಎನ್‌ಆರ್‌ಸಿ ಪರ ಜನಾಂದೋಲನ 31ರಿಂದ

ತಾಲ್ಲೂಕು ಕೇಂದ್ರದಿಂದ ಬೂತ್‌ ಮಟ್ಟದವರೆಗೂ ಜಾಗೃತಿ ಕಾರ್ಯಕ್ರಮ; ಅಶ್ವಥ್‌ನಾರಾಯಣ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 13:58 IST
Last Updated 28 ಡಿಸೆಂಬರ್ 2019, 13:58 IST
ಅಶ್ವಥ್‌ ನಾರಾಯಣ
ಅಶ್ವಥ್‌ ನಾರಾಯಣ   

ಮಂಡ್ಯ: ‘ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಿ.31ರಿಂದ ರಾಜ್ಯದಾದ್ಯಂತ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಬಿಜೆಪಿ ಮುಖಂಡ ಅಶ್ವಥ್‌ ನಾರಾಯಣ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರತಿ ಜಿಲ್ಲೆಯ ತಾಲ್ಲೂಕಿನಿಂದ ಹಿಡಿದು ಬೂತ್‌ ಮಟ್ಟದ ವರೆಗೆ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಕಾಯ್ದೆಗಳ ಬಗ್ಗೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ಧಾರ್ಮಿಕ ಮುಖಂಡರಿಗೆ ಕಾಯ್ದೆಯಿಂದ ಆಗುವ ಲಾಭಗಳ ಬಗ್ಗೆ ಮನವರಿಕೆ ಮಾಡಲಾಗುವುದು. 3 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಲಾಗಿದ್ದು, ಇದನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ತಕ್ಕ ಉತ್ತರ ನೀಡಲಾಗುವುದು’ ಎಂದು ಹೇಳಿದರು.

‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಪ್ರಣಾಳಿಕೆಯ ಎನ್‌ಆರ್‌ಸಿ ಭರವಸೆಯನ್ನು ಜಾರಿಗೆ ತಂದಿದ್ದು ಅದಕ್ಕೆ ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಾರ್ಟಿಗಳು ಉದ್ದೇಶ ಪೂರ್ವಕವಾಗಿ ತೊಂದರೆ ಮಾಡುತ್ತಿದೆ. ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದತಿ, ತ್ರಿವಳಿ ತಲಾಖ್‌ ನಿಷೇಧ, ರಾಮಮಂದಿರ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಈ ಹಿಂದೆ 2003ರಲ್ಲಿ ಮನಮೋಹನ್‌ ಸಿಂಗ್‌ ಎನ್‌ಆರ್‌ಸಿ ಜಾರಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲೇ ಮಾತನಾಡಿದ್ದರು. ಹಿಂದೆಲ್ಲಾ ಅಕ್ರಮ ವಲಸಿಗರು ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ಬಂದು ಮತದಾರ ಚೀಟಿ ಪಡೆದುಕೊಂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಮತದಾರರ ಪಟ್ಟಿಯನ್ನು ಸೋಮನಾಥ್‌ ಚಟರ್ಜಿ ಮುಖಕ್ಕೆ ಎಸೆದು ಹೋಗಿದ್ದರು. ಆದರೆ ಇಂದು ಅವರೇ ಇದನ್ನು ಜಾರಿಗೆ ತರಲು ಅಡ್ಡಿಪಪಡಿಸುತ್ತಿರುವುದರ ಹಿಂದಿನ ಔಚಿತ್ಯವೇನು’ ಎಂದು ಪ್ರಶ್ನಿಸಿದರು.

‘ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆಗೆ ಶಾಸಕ ಯು.ಟಿ.ಖಾದರ್‌, ಸಿದ್ದರಾಮಯ್ಯ ನೇರ ಕಾರಣ. ಅವರ ಹೇಳಿಕೆಗಳು ಇವುಗಳಿಗೆ ಪುಷ್ಠಿ ನೀಡುತ್ತಿವೆ. ಅಲ್ಲದೆ ಗಲಭೆಯಲ್ಲಿ ಮೃತರಾದವರಿಗೆ ಸಿದ್ದರಾಮಯ್ಯ, ಮಮತಾ ಬ್ಯಾನರ್ಜಿ, ಕೇರಳ ಸರ್ಕಾರ ಪರಿಹಾರ ನೀಡುವ ಅಗತ್ಯ ಏನಿತ್ತು? ಹಿಂದೂ–ಮುಸ್ಲಿಮರ ನಡುವೆ ಕೋಮುವಾದ ಬಿತ್ತುವ ಕೆಲಸ ಮಾಡಲಾಗುತ್ತಿದ್ದು, ನಮ್ಮ ವಿರುದ್ಧ ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳು ಎತ್ತಿ ಕಟ್ಟುತ್ತಿವೆ’ ಎಂದು ಆರೋಪಿಸಿದರು.

‘ಕನಕಪುರದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ಅವರ ಗುಂಡಿಯನ್ನು ಅವರೇ ತೋಡಿಕೊಳ್ಳುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಗಳಿಸಲು ಹಿರಿಯ ನಾಯಕರನ್ನು ಓಲೈಸಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಪ್ರತಿಫಲವನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

ಮಾಜಿ ಶಾಸಕ ಎಚ್‌.ಹೊನ್ನಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ನಗರ ಘಟಕದ ಅಧ್ಯಕ್ಷ ಎಚ್‌.ಆರ್‌.ಅರವಿಂದ್‌, ಮುಖಂಡರಾದ ಶಿವಣ್ಣ, ಸಿದ್ದರಾಮಯ್ಯ, ನಂಜುಂಡೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.